top of page

“ಪರಿಸರ ವ್ಯವಸ್ಥೆ ಮರುಸ್ಥಾಪನೆ ದಶಕ” ವನ್ನು ಘೋಷಿಸಲಿರುವ ವಿಶ್ವಸಂಸ್ಥೆ


ವಿಶ್ವಸಂಸ್ಥೆಯ ಪರಿಸರ ವ್ಯವಸ್ಥೆ ಮರುಸ್ಥಾಪನೆ ದಶಕವು ಜೂನ್ 5 ರ ವಿಶ್ವ ಪರಿಸರ ದಿನಾಚರಣೆಯಂದು ಆರಂಭಗೊಳ್ಳುತ್ತಿದೆ. ಈ ಆನ್‍ಲೈನ್ ಸಭೆಗೆ ಪೋಪ್ ಫ್ರಾನ್ಸಿಸ್ ಅವರನ್ನು ಸಂದೇಶ ನೀಡಲು ಆಹ್ವಾನಿಸಲಾಗಿದೆ.


ವರದಿ: ರಾಬಿನ್ ಗೋಮ್ಸ್


ಶನಿವಾರ ಜೂನ್ 5 ನೇ ತಾರೀಖು ವಿಶ್ವಸಂಸ್ಥೆಯ ವಾರ್ಷಿಕ ವಿಶ್ವ ಪರಿಸರ ದಿನಾಚರಣೆಯಾಗಿದೆ. ಈ ವರ್ಷ ವಿಶ್ವ ಪರಿಸರ ದಿನಾಚರಣೆಯಂದು ವಿಶ್ವಸಂಸ್ಥೆ ಪರಿಸರ ವ್ಯವಸ್ಥೆ ಮರುಸ್ಥಾಪನೆ ದಶಕವನ್ನು ಘೋಷಿಸಿ, ಉದ್ಘಾಟಿಸಲಿದೆ. ವಿಶ್ವ ಪರಿಸರ ದಿನಾಚರಣೆಯ ಈ ವರ್ಷದ ಶೀರ್ಷಿಕೆ: “ಮರುಚಿಂತಿಸು, ಮರುಸೃಷ್ಠಿಸು, ಮರುಸ್ಥಾಪಿಸು” ಎಂಬುದಾಗಿದೆ. ಈ ಶೀರ್ಷಿಕೆಯು ಮುಂಬರುವ ‘ಪರಿಸರ ವ್ಯವಸ್ಥೆ ಮರುಸ್ಥಾಪನೆ ದಶಕ’ ವು ಹೇಗೆ ಎಲ್ಲವನ್ನೂ ಅಪ್ಪಿಕೊಂಡು ಕ್ರಿಯಾಯೋಜನೆಯನ್ನು ರೂಪಿಸಿದೆ ಎಂಬುದನ್ನು ಸೂಚಿಸುತ್ತದೆ.


ಈ ಕುರಿತ ಕ್ರಮಕ್ಕೆ ವಿಶ್ವದ ಸುಮಾರು 70 ದೇಶಗಳು ಪ್ರಸ್ತಾಪ ಸಲ್ಲಿಸಿದ್ದರಿಂದ ವಿಶ್ವಸಂಸ್ಥೆಯ ಸಾಮಾನ್ಯ ಶೃಂಗಸಭೆಯು 2019 ರಲ್ಲಿ 2021 ರಿಂದ 2030 ರ ವರೆಗಿನ ಹತ್ತು ವರ್ಷಗಳನ್ನು ವಿಶ್ವಸಂಸ್ಥೆಯ ಪರಿಸರ ವ್ಯವಸ್ಥೆ ಮುರುಸ್ಥಾಪನೆ ದಶಕವೆಂದು ಘೋಷಿಸಲು ನಿರ್ಧರಿಸಿತು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‍ಇಪಿ) ಹಾಗೂ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‍ಎಒ) ಗಳ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯು ವಿಶ್ವದಾದ್ಯಂತ ಪರಿಸರ ವ್ಯವಸ್ಥೆಗಳ ಅವನತಿಯನ್ನು ತಡೆಯಲು ಹಾಗೂ ಆ ಕುರಿತು ನಡೆಯುತ್ತಿರುವ ಪ್ರಯತ್ನಗಳನ್ನಯ ಹಿಮ್ಮುಖಗೊಳಿಸಲು ಒಂದು ಬಲವಾದ ಜಾಗತಿಕ ಆಂದೋಲನವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.


ವಿಶ್ವಸಂಸ್ಥೆಯ ‘ಪರಿಸರ ವ್ಯವಸ್ಥೆಯ ಮರುಸ್ಥಾಪನೆ ದಶಕ’ ದ ಪ್ರಾರಂಭ


ವಿಶ್ವ ಪರಿಸರ ದಿನಕ್ಕೂ ಮುಂಚಿತವಾಗಿ ಅಂದರೆ ಜೂನ್ 4, ಶುಕ್ರವಾರ ಸಂಜೆ ವಿಶ್ವಸಂಸ್ಥೆಯ ‘ಪರಿಸರ ವ್ಯವಸ್ಥೆಯ ಮರುಸ್ಥಾಪನೆ ದಶಕ’ ವನ್ನು ಆನ್‍ಲೈನ್ ಮುಖಾಂತರ ಉದ್ಘಾಟಿಸಲಾಗುವುದು. ಈ ಕಾರ್ಯಕ್ರಮವು ಈ ವರ್ಷದ ಅಂತರಾಷ್ಟ್ರೀಯ ಪರಿಸರ ದಿನಾಚರಣೆಯ ಆತೀಥೇಯರಾದ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್, ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂತೋನಿಯೋ ಗ್ವತಾರೆಸ್, ಯುಎನ್‍ಇಪಿ ಯ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆಂಡರ್ಸನ್, ಹಾಗೂ ಎಫ್‍ಎಒ ಮಹಾನಿರ್ದೇಶಕ ಕ್ಯೂ.ಯು. ಡೋಂಗ್ಯು ಅವರಂತಹ ವಿಶ್ವನಾಯಕರನ್ನು ಒಳಗೊಳ್ಳಲಿದೆ.


ನಮ್ಮ ಪರಿಸರದ ಹಾಗೂ ನಮ್ಮ ‘ಸ್ವಾಭಾವಿಕ ಮನೆ’ ಭೂಮಿಯ ಉತ್ಕಟ ಪ್ರೇಮಿ ಹಾಗೂ ಪ್ರತಿಪಾದಕರಾದ ಪೋಪ್ ಫ್ರಾನ್ಸಿಸ್ ಅವರು ಈ ಕಾರ್ಯಕ್ರಮದ ಕುರಿತು ಮಾತನಾಡಲಿದ್ದಾರೆ. ಪೋಪ್ ಫ್ರಾನ್ಸಿಸ್ 2015 ರ ತಮ್ಮ ಪ್ರೇಷಿತ ಪತ್ರ “ಲೌದಾತೋ ಸೀ” ನಲ್ಲಿ ಪರಿಸರ ನಾಶ ಮತ್ತು ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಅನಿಯಂತ್ರಿತ ಗ್ರಾಹಕೀಕರಣ ಮತ್ತು ಬೇಜವಾಬ್ದಾರಿಯುತ ಅಭಿವೃದ್ಧಿಯನ್ನು ಖಂಡಿಸಿ, ಈ ಕುರಿತು ಶೀಘ್ರ ಏಕೀಕೃತ ಜಾಗತಿಕ ಕ್ರಮವನ್ನು ತೆಗೆದುಕೊಳ್ಳಲು ಕರೆ ನೀಡುತ್ತಾರೆ.


ವಿಶ್ವಸಂಸ್ಥೆಯ ದಶಕವು ಸುಸ್ಥಿರ ಅಭಿವೃದ್ಧಿ ಮತ್ತು ವಿಜ್ಞಾನಿಗಳು ಗುರುತಿಸಿರುವ ದುರಂತಮಯ ಹವಾಮಾನ ಬದಲಾವಣೆಯ ಸಮಯಕ್ಕೆ ಹಾಗೂ ಇದನ್ನು ತಡೆಗಟ್ಟಲು ನೀಡಿರುವ ಕೊನೆ ಅವಕಾಶದ ಗಡುವಾಗಿದೆ. ಈಗಾಗಲೇ ಜಾರಿಯಲ್ಲಿರುವ ಹಲವು ಉಪಕ್ರಮಗಳೊಂದಿಗೆ ಈ ಯೋಜನೆಯು ಮತ್ತೆ ಈ ಭೂಮಿಯನ್ನು ಸುಸ್ಥಿರ ಭವಿಷ್ಯದ ಪಥದಲ್ಲಿ ನಡೆಸಲು ಯಶಸ್ವಿ ಪರಿಸರ ವ್ಯವಸ್ಥೆಯ ಮರುಸ್ಥಾಪನೆಯ ಪ್ರಾಮುಖ್ಯತೆಯ ಕುರಿತು ಜಾಗೃತಿಯನ್ನು ಮೂಡಿಸುತ್ತದೆ.


ಸಂವಹನ, ಕಾರ್ಯಕ್ರಮಗಳು ಹಾಗೂ ಒಂದು ಒಳ್ಳೆಯ ಜಾಲತಾಣದ ವೇದಿಕೆಯನ್ನು ನೀಡುವುದರ ಮೂಲಕ ವಿಶ್ವಸಂಸ್ಥೆಯ ದಶಕ ಯೋಜನೆಯು ಮರುಸ್ಥಾಪನೆಯ ಕುರಿತು ಆಸಕ್ತಿ ಹೊಂದಿರುವವರಿಗೆ ಮರುಸ್ಥಾಪನೆಯನ್ನು ಯಶಸ್ವಿಗೊಳಿಸಲು ಯೋಜನೆಗಳು ಮತ್ತು ಪಾಲುದಾರರು ಹಾಗೂ ಅಗತ್ಯ ಹಣ ಮತ್ತು ಜ್ಞಾನಕ್ಕೆ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.


ಕ್ಷೀಣಿಸುತ್ತಿರುವ ವಿಶ್ವದ ಪರಿಸರ ವ್ಯವಸ್ಥೆ


ಆರೋಗ್ಯಕರ ಪರಿಸರ ವ್ಯವಸ್ಥೆಗಳು ಜನರ ಜೀವನೋಪಾಯವನ್ನು ವೃದ್ಧಿಸುತ್ತವಲ್ಲದೆ ಹವಾಮಾನ ಬದಲಾವಣೆಯನ್ನು ಪ್ರತಿರೋಧಿಸುತ್ತದೆ. ಇದಲ್ಲದೆ ಜೀವವೈವಿಧ್ಯತೆಯ ಕುಸಿತವನ್ನು ತಡೆಗಟ್ಟುತ್ತದೆ. ಪರಿಸರ ವ್ಯವಸ್ಥೆಗಳು ಕಾಡಿನಂತೆ ದೊಡ್ಡದಾಗಿಯೂ ಹಾಗೂ ಚಿಕ್ಕ ಕೊಳದಂತೆ ಪುಟ್ಟದಾಗಿಯೂ ಇರಬಹುದು. ಯುಎನ್‍ಇಪಿ ವರ್ಗೀಕರಣದ ಪ್ರಕಾರ ವಿಶ್ವದಲ್ಲಿ 8 ವಿಧದ ಪರಿಸರ ವ್ಯವಸ್ಥೆಗಳಿವೆ: ಕೃಷಿಭೂಮಿ, ಅರಣ್ಯಗಳು, ಕೆರೆ ಮತ್ತು ನದಿಗಳು, ಹುಲ್ಲುಗಾವಲುಗಳು ಮತ್ತು ಸವನ್ನಾ, ಪರ್ವತಗಳು, ಸಾಗರಗಳು ಮತ್ತು ಕರಾವಳಿ, ಫಲವತ್ತಾದ ನೆಲ ಮತ್ತು ನಗರ ಪ್ರದೇಶಗಳು. ಇವೆಲ್ಲವೂ ಜನರಿಗೆ ನೀರು, ಆಹಾರ, ನೆಲೆ ಹಾಗೂ ಮುಂತಾದ ಜೀವನಾವಶ್ಯಕ ವಸ್ತುಗಳನ್ನು ನೀಡುತ್ತವೆಯಲ್ಲದೆ, ಮನುಷ್ಯ ಸಮಾಜಕ್ಕೆ ಇವುಗಳು ಪ್ರಮುಖವಾಗಿ ಬೇಕಾಗಿರುವಂತವುಗಳಾಗಿವೆ. ಇದಲ್ಲದೆ ಇವುಗಳು ಹವಾಮಾನ ಬದಲಾವಣೆಯನ್ನು ನಿಯಂತ್ರಿಸುತ್ತದೆಯಲ್ಲದೆ ಜೀವವೈವಿಧ್ಯವನ್ನೂ ಸಹ ಸಂರಕ್ಷಿಸುತ್ತದೆ. ಆದರೆ ಇತ್ತೀಚಿನ ದಶಕಗಳಲ್ಲಿ ಸಂಪನ್ಮೂಲಗಳ ಕುರಿತ ಮಾನವನ ಅತಿಯಾದ ಆಸೆ ಮತ್ತು ಹಸಿವು, ನಮ್ಮ ಪರಿಸರ ವ್ಯವಸ್ಥೆಗಳನ್ನು ಅಪಾಯದಂಚಿಗೆ ಸಿಲುಕಿಸಿದೆ. ಈ ಪರಿಸರ ವ್ಯವಸ್ಥೆಗಳ ಮರುಸ್ಥಾಪನೆಯನ್ನು ಮರಗಳನ್ನು ನೆಡುವುದರ ಮೂಲಕ, ನಗರಗಳನ್ನು ಹಸಿರುಮಯವನ್ನಾಗಿಸುವುದರ ಮೂಲಕ. ನಮ್ಮ ತೋಟಗಳನ್ನು ಪುನಃ ಆರಂಭಿಸುವುದರ ಮೂಲಕ, ಹಾಗೂ ನದಿ ಹಾಗೂ ಇನ್ನಿತರ ನೀರಿನ ಮೂಲಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಮಾಡಬಹುದಾಗಿದೆ.


ಮಾನವ ಕುಲವು ಪರಿಸರವನ್ನು ಸುರ್ಧೀಘ ಕಾಲ ಶೋಷಿಸಿ, ಭೂಮಿಯ ಮೇಲಿನ ಪರಿಸರ ವ್ಯವಸ್ಥೆಯನ್ನು ನಾಶಮಾಡುತ್ತಾ ಬಂದಿದೆ. ಪ್ರತಿ 3 ಸೆಕೆಂಡಿಗೊಮ್ಮೆ ಭೂಮಿಯ ಮೇಲೆ ಒಂದು ಫುಟ್ಬಾಲ್ ಮೈದಾನದಷ್ಟು ಕಾಡು ನಾಶವಾಗುತ್ತಿದೆ. ಪ್ರತಿ ವರ್ಷ 4.7 ಮಿಲಿಯನ್ ಹೆಕ್ಟೇರುಗಳಷ್ಟು ಅಂದರೆ ಡೆನ್ಮಾರ್ಕ್ ದೇಶದ ವಿಸ್ತಾರದಷ್ಟು ಕಾಡು ನಾಶವಾಗುತ್ತಿದೆ.

ತೇವಾಂಶ ಹೊಂದಿರುವ ಭೂಮಿಯನ್ನು ಕೃಷಿ ಕಾರಣಗಳಿಗಾಗಿ ಬರಿದು ಮಾಡಲಾಗುತ್ತಿದೆ. ಕಳೆದ 800 ವರ್ಷಗಳಲ್ಲಿ ಶೇಕಡ 87 ರಷ್ಟು ತೇವಾಂಶ ಭೂಮಿಯು ನಾಶವಾಗಿದೆ. ಕಳೆದೊಂದು ಶತಮಾನದಲ್ಲೇ ಉಳಿದ ಅರ್ಧದಷ್ಟು ತೇವಾಂಶ ಭೂಮಿಯನ್ನು ನಾವು ನಾಶಪಡಿಸಿದ್ದೇವೆ. ಅದಲ್ಲದೆ ಜಗತ್ತಿನ ಶೇಕಡ 80 ರಷ್ಟು ಬಳಸಿದ ನೀರನ್ನು ಯಾವುದೇ ರೀತಿ ಸಂಸ್ಕರಿಸದೆ ಸಮುದ್ರಗಳ ಪಾಲಾಗಿಸುತ್ತಿದ್ದೇವೆ. ಇನ್ನು ಈಗಾಗಲೇ ಶೇಕಡ 50 ರಷ್ಟು ಸಮುದ್ರದೊಳಗಿನ ಹೌಳದ ಪದರಗಳನ್ನು ನಾವು ಕಳೆದುಕೊಂಡಿದ್ದೇವೆ ಹಾಗೂ ಜಾಗತಿಕ ತಾಪಮಾನ 1.5 ಸೆಲ್ಸಿಯಸ್ ಇದ್ದರೂ ಸಹ ಇನ್ನು 50 ವರ್ಷಗಳಲ್ಲಿ ಶೇಕಡ 90 ರಷ್ಟು ಸಮುದ್ರದೊಳಗಿನ ಹವಳ ಪದರ ಹಾಗೂ ಜೀವರಾಶಿಗಳನ್ನು ಕಳೆದುಕೊಳ್ಳುತ್ತೇವೆ.


180 ಕ್ಕೂ ಅಧಿಕ ದೇಶಗಳಲ್ಲಿ ಹಬ್ಬಿಕೊಂಡಿರುವ ಫಲವತ್ತಾದ ತೇವಾಂಶಭರಿತ ನೆಲವು ಅತ್ಯಂತ ಉತ್ತಮ, ಅನುಕೂಲಕರ ಪರಿಸರ ವ್ಯವಸ್ಥೆಗಳಾಗಿವೆ. ಅವು ವಿಶ್ವದ ಕೇವಲ 3 ರಷ್ಟು ಭೂಮಿಯನ್ನು ಹೊಂದಿದ್ದರೂ ಸಹ ಶೇಕಡ 30 ರಷ್ಟು ಮಣ್ಣಿನ ಇಂಗಾಲವನ್ನು ಹೊಂದಿವೆ.


ಜಾಗತಿಕ ಹಸಿರುಮನೆಯ ಅನಿಲವು ಕಳೆದ 3 ವರ್ಷಗಳಿಂದ ಹೊರಸೂಸುತ್ತಿದ್ದು, ನಮ್ಮ ವಿಶ್ವವು ಭಿಕರ ಹವಾಮಾನ ಬದಲಾವಣೆಯ ದುರಂತದತ್ತ ಸಾಗಿದೆ. ಕೋವಿಡ್ ಸಾಂಕ್ರಮಿಕ ರೋಗವು ಹವಾಮಾನ ಬದಲಾವಣೆ ಎನ್ನುವುದು ಯಾವ ರೀತಿ ಅಪಾಯಕಾರಿ ಎಂಬುದನ್ನು ನಮಗೀಗಾಲೇ ತೋರಿಸಿದೆ. ಪ್ರಾಣಿಪಕ್ಷಿಗಳ ಸಾಮಾನ್ಯ ವಾಸಸ್ಥಾನವನ್ನು ಕುಗ್ಗಿಸಿರುವ ನಾವು ಕೊರೋನಾದಂತಹ ರೋಗಕಾರಕಗಳಿಗೆ ಉತ್ತಮ ವಾತಾವರಣವನ್ನು ನಿರ್ಮಿಸಿದ್ದೇವೆ.


ಈ ಕುರಿತು ದಾರಿ ತೋರಿಸಲಿರುವ ಪಾಕಿಸ್ತಾನ


ಮುಂಗಾರುಗಳಲ್ಲಿ ಹೆಚ್ಚಿದ ವ್ಯತ್ಯಾಸ, ಹಿಮಾಲಯದ ಹಿಮನದಿಗಳು ಹಾಗೂ ಪ್ರವಾಹಗಳು ಮತ್ತು ಬರಗಳು ಸೇರಿದಂತೆ ಹವಾಮಾನ ವೈಪರೀತ್ಯದಂತಹ ಘಟನೆಗಳಿಗೆ ಪಾಕಿಸ್ತಾನವು ಶಂಕಿತವಾಗಿದೆ. ಇದು ಆಹಾರ ಮತ್ತು ನೀರಿನ ಅಭದ್ರತೆಯನ್ನು ಹೆಚ್ಚಿಸುತ್ತದೆ. ಬ್ಲೂಮ್‍ಬರ್ಗ್ ವರದಿಯ ಪ್ರಕಾರ ವಿಶ್ವದ ಶೇಕಡ 31 ಕ್ಕೆ ಹೋಲಿಸಿದರೆ ಪಾಕಿಸ್ತಾನವು ಕೇವಲ ಶೇಕಡ 5 ರಷ್ಟು ಮಾತ್ರ ಅರಣ್ಯಪ್ರದೇಶವನ್ನು ಹೊಂದಿದೆ ಎಂದು ವರದಿ ಮಾಡಿದೆ. ಅಂದರೆ ಪಾಕಿಸ್ತಾನವು ಹವಾಮಾನ ಬದಲಾವಣೆಗೆ ತೀವ್ರವಾಗಿ ಒಳಗಾಗುವ ವಿಶ್ವದ 6 ದೇಶಗಳಲ್ಲಿ ಒಂದಾಗಿದೆ.


ಜನಸಂಖ್ಯಾ ಪ್ರಮಾಣದಲ್ಲಿ ವಿಶ್ವದ ಆರನೇ ಸ್ಥಾನದಲ್ಲಿರುವ ಪಾಕಿಸ್ತಾನವು ತನ್ನ ಮಿತಿಮೀರಿದ ಜನಸಂಖ್ಯಾ ಪ್ರಮಾಣದಿಂದ ಅನೇಕ ಪ್ರಾಕೃತಿಕ ಸಮಸ್ಯೆಗಳನ್ನು ಹೊಂದಿದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ ಪಾಕಿಸ್ತಾನದ ಶೇಕಡ 24 ರಷ್ಟು ಜನರು ಬಡತನದಲ್ಲಿ ಜೀವಿಸುತ್ತಿದ್ದಾರೆ. ಅಂದರೆ ಈ ಜನರು ಹವಾಮಾನ ಬದಲಾವಣೆಯಂತಹ ವಿಕೋಪಗಳು ಉಂಟಾದರೆ ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಇವರು ಪ್ರಧಾನವಾಗಿ ತಮ್ಮೆಲ್ಲಾ ಅವಶ್ಯಕತೆಗಳಿಗೆ ಸ್ವಾಭಾವಿಕ ಸಂಪನ್ಮೂಲಗಳನ್ನೇ ನೆಚ್ಚಿಕೊಂಡಿದ್ದಾರೆ. ಹಾಗಾಗಿ ಹವಾಮಾನ ಬದಲಾವಣೆಯಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಅಸಮರ್ಥರಾಗಿದ್ದಾರೆ.


ಇವೆಲ್ಲವುಗಳ ನಡುವೆಯೂ ಈ ವರ್ಷದ ಜೂನ್ 5 ರ ವಿಶ್ವ ಪರಿಸರದ ದಿನಾಚರಣೆಯ ಆತಿಥೇಯ ರಾಷ್ಟ್ರವಾಗಿರುವ ಪಾಕಿಸ್ತಾನ, ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸುವಲ್ಲಿ ತಾನು ಸಿಧ್ಧಗೊಂಡಿದ ಎಂಬುದನ್ನು ತನ್ನ “ದಿ ಟೆನ್ ಬಿಲಿಯನ್ ಟ್ರೀ ಸುನಾಮಿ” ಯೋಜನೆ (ಹತ್ತು ಕೋಟಿ ಮರನೆಡುವ ಸುನಾಮಿ) ಯೊಂದಿಗೆ ಸೂಚಿಸಿದೆ. ಯುಎನ್‍ಇಪಿ ಉತ್ತೇಜನವನ್ನು ಹೊಂದಿರುವ ಪಾಕಿಸ್ತಾನದ ಈ ಯೋಜನೆಯು 2023 ರೊಳಗೆ 10 ಕೋಟಿ ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದೆ.


2019 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಇತ್ತೀಚೆಗೆ ಒಂದು ಮೈಲಿಗಲ್ಲನ್ನು ದಾಟಿದೆ. ಅಂದರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಇತ್ತೀಚೆಗೆ ಖೈಬರ್ ಪಕ್ತುಂಕ್ವ ಪ್ರಾಂತ್ಯದ ಕಾಡಿನಲ್ಲಿ ಕೋಟಿಯ (ಬಿಲಿಯಂತ್ ಟ್ರೀ) ಮರವನ್ನು ನೆಟ್ಟರು.


“ಪಾಕಿಸ್ತಾನದ ‘ದಿ ಬಿಲಿಯನ್ ಟ್ರೀ ಸುನಾಮಿ ಪ್ರಾಜೆಕ್ಟ್’ ನಂತಹ ಧೀರ್ಘಕಾಲಿಕ, ದೊಡ್ಡ ಪ್ರಮಾಣದ ಪರಿಸರ ವ್ಯವಸ್ಥೆ ಮರುಸ್ಥಾಪನೆ ಉಪಕ್ರಮಗಳು ವಿಶ್ವಸಂಸ್ಥೆಯ ಪರಿಸರ ವ್ಯವಸ್ಥೆಗಳ ಮರುಸ್ಥಾಪನೆ ದಶಕ ಯೋಜನೆಗೆ ಪೂರಕವಾಗುವ ಪ್ರಮುಖ ಕೇಂದ್ರ ಕ್ರಮಗಳಾಗಿವೆ” ಎಂದು ಯುಎನ್‍ಇಪಿಯ ಏಷಿಯಾ ಪೆಸಿಫಿಕ್ ಪ್ರಾದೇಶಿಕ ನಿರ್ದೇಶಕರಾದ ದೆಚೆನ್ ಸರಿಂಗ್ ಅವರು ಹೇಳಿದ್ದಾರೆ. “ಇತಿಹಾಸದಲ್ಲಿ ನಾವು ಮುಂದುವರೆಯಲೇಬೇಕು ಎನ್ನುವ ಕಾಲಘಟ್ಟಕ್ಕೆ ನಾವು ಬಂದಿದ್ದೇವೆ ಹಾಗೂ ಪಾಕಿಸ್ತಾನ ಈ ಪ್ರಮುಖ ಪರಿಶ್ರಮವನ್ನು ಮುನ್ನಡೆಸುತ್ತಿದೆ.” ಎಂದರು.


ಈ ಯೋಜನೆಯು ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸಲು ಸಹಾಯಕವಾಗಿದೆ ಮಾತ್ರವಲ್ಲದೆ ಅನೇಕ ಜನರು ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುವಂತೆಯೂ ಮಾಡಿದೆ. ಈ ಯೋಜನೆಯು ಸುಮಾರು 85,000 ದಿನಗೂಲಿ ಕೆಲಸದವರಿಗೆ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಪಾಕಿಸ್ತಾನದ ರಕ್ಷಣಾತ್ಮಕ ಪ್ರದೇಶವು 7000 ಧೀರ್ಘಕಾಲಿಕ ಉದ್ಯೋಗಗಳನ್ನು ಸೃಷ್ಟಿಸಲಿದೆ.


03 ಜೂನ್ 2021, 16:10


ಕನ್ನಡಕ್ಕೆ: ಅಜಯ್ ರಾಜ್


35 views0 comments

Comments


bottom of page