top of page

ಪವಿತ್ರಾತ್ಮರಿಗಾಗಿ ನಿಮ್ಮ ಹೃದಯಗಳನ್ನು ತೆರೆಯಿರಿ: ಪೋಪ್ ಫ್ರಾನ್ಸಿಸ್


ಪಂಚದಶಮಿ ಹಬ್ಬದ ಭಾನುವಾರದಂದು ಸಂತ ಪೇತ್ರರ ಬಸಿಲಿಕದಲ್ಲಿ ಬಲಿಪೂಜೆಯನ್ನರ್ಪಿಸುತ್ತಾ ಮಾತನಾಡಿದ ಪೋಪ್ ಫ್ರಾನ್ಸಿಸ್ “ಅತ್ಯುನ್ನತ ಉಡುಗೊರೆ” “ಉಡುಗೊರೆಗಳ ಉಡುಗೊರೆ” ಹಾಗೂ ಸ್ವತಃ ದೇವರ ಪ್ರೀತಿಯೇ ಆದ ಪವಿತಾತ್ಮರನ್ನು ಯೇಸು ತಮ್ಮ ಶಿಷ್ಯರಿಗೆ ಕಳುಹಿಸುತ್ತೇನೆ ಎಂದು ನೀಡಿದ ವಾಗ್ದಾನವನ್ನು ನೆನಪಿಸಿಕೊಂಡರು.


ವರದಿ: ವ್ಯಾಟಿಕನ್ ಸುದ್ದಿ ಸಿಬ್ಬಂದಿ ಬರಹಗಾರ


ಭಾನುವಾರದ ಪಂಚದಶಮಿ ಹಬ್ಬದ ಬಲಿಪೂಜೆಯ ಪ್ರಬೋಧನೆಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅತೀ ನಿಗೂಢವಾದ, ಅನುವಾದಿಸಲು ಕಷ್ಟಸಾಧ್ಯವಾದ ಪದ, ಹಾಗೂ ಯೇಸು ಶಿಷ್ಯರಿಗೆ ಪವಿತ್ರಾತ್ಮರ ಕುರಿತು ವಿವರಿಸುವಾಗ ಬಳಸಿದ “ಪ್ಯಾರಕ್ಲೀಟ್” ಪದದ ಕುರಿತು ವಿಸ್ಕøತವಾಗಿ ಚರ್ಚಿಸಿದರು. ಪ್ರಸ್ತುತ ಈ ಪದವನ್ನು “ಉಪಶಮಿಕ” ಮತ್ತು “ಪ್ರತಿಪಾದಕ” ಎಂಬುದಾಗಿ ಅರ್ಥೈಸಬಹುದೆಂದು ಪೋಪ್ ಫ್ರಾನ್ಸಿಸ್ ಅಭಿಪ್ರಾಯಪಟ್ಟರು.


ಉಪಶಮಿಕರಾಗಿ ಪವಿತ್ರಾತ್ಮರು


ಕಷ್ಟದ ಸಮಯದಲ್ಲಿ ನಾವು ಸಾಂತ್ವನಕ್ಕಾಗಿ ಎದುರುನೋಡುತ್ತೇವೆ ಎಂದ ಪೋಪ್ ಫ್ರಾನ್ಸಿಸ್ “ಬಹುತೇಕ ಸಂದರ್ಭಗಳಲ್ಲಿ ನಾವು ಪ್ರಾಪಂಚಿಕ ಪರಿಹಾರಗಳನ್ನು ಬಯಸುತ್ತೇವೆ. ಇವು ಕ್ಷಣಿಕವಾಗಿದ್ದು, ನೋವಿನ ಮಾತ್ರೆಗಳಂತೆ ನಮ್ಮ ನೋವನ್ನು ಕಡಿಮೆ ಮಾಡಬಲ್ಲವೇ ವಿನಃ ಅದನ್ನು ಸಂಪೂರ್ಣವಾಗಿ ತೊಡೆದುಹಾಕುವುದಿಲ್ಲ. ಆದರೆ, ನಾವು ಇದ್ದ ಹಾಗೇ ನಮ್ಮನ್ನು ಪ್ರೀತಿಸಿ, ಪ್ರೀತಿಯ ಭಾವ ನಮ್ಮಲ್ಲಿ ಮೂಡುವಂತೆ ಮಾಡುವವರು ನಮ್ಮ ಇಂದ್ರೀಯಗಳಿಗೆ ಮಾತ್ರವಲ್ಲ ನಮ್ಮ ಹೃದಯಕ್ಕೂ ಸಹ ಶಾಂತಿಯನ್ನು ಹಾಗೂ ಉಪಶಮನವನ್ನು ನೀಡುತ್ತಾರೆ. ಅವರೇ ದೇವರ ಪ್ರೀತಿಯಾದ ಪವಿತ್ರಾತ್ಮರು: ನಮ್ಮ ದೈವಿಕ ಪರಿಹಾರ. ಪವಿತ್ರಾತ್ಮರು ನಮ್ಮಾತ್ಮದಲ್ಲಿ ಸಂಚರಿಸುವುದಲ್ಲದೆ, ನಮ್ಮ ಜೊತೆಗಿದ್ದು, ನಮ್ಮ ಸಾಂತ್ವನದ ಬುಗ್ಗೆಯೇ ಆಗಿದ್ದಾರೆ” ಎಂದರು.


ನಮ್ಮ ಬದುಕಿನಲ್ಲಿರುವ ಅಂಧಕಾರ, ಒಂಟಿತನ ಮತ್ತು ನೋವನ್ನು ಎದುರಿಸಲು “ನಿಮ್ಮ ಹೃದಯಗಳನ್ನು ಪವಿತ್ರಾತ್ಮರಿಗೆ ತೆರೆಯಿರಿ” ಎಂದು ಪೋಪ್ ಫ್ರಾನ್ಸಿಸ್ ಎಲ್ಲರನ್ನೂ ಪ್ರೋತ್ಸಾಹಿಸಿದರು. ಎಲ್ಲವೂ ಸರಿಯಿದ್ದಾಗ ಈ ಜಗತ್ತು ನಮ್ಮನ್ನು ಹೊಗಳುತ್ತದೆ. ಅದೇ ಸ್ವಲ್ಪ ತಪ್ಪಾದರೆ ಸಾಕು, ಇದೇ ಜಗತ್ತು ನಮ್ಮನ್ನು ತೀವ್ರವಾಗಿ ಖಂಡಿಸುತ್ತದೆ. ಖಂಡಿತವಾಗಿಯೂ ಇದು ಸೈತಾನನ ಕ್ರಿಯೆಯೇ ಆಗಿದೆ. ಇದೇ ವೇಳೆ ಪ್ರೇಷಿತರ ಅನುಭವದ ಕುರಿತು ಮಾತನಾಡಿದ ಪೋಪ್, ಅವರ ಅನುಭವ ನಮಲ್ಲಿ ವಿಶ್ವಾಸವನ್ನು ಮೂಡಿಸಬೇಕು ಎಂದರು. “ಅವರ ಭಯ, ವೈಫಲ್ಯ ಮತ್ತು ಬಲಹೀನತೆಗಳ ಹೊರತಾಗಿಯೂ, ಪ್ರೇಷಿತರ ಮೇಲೆ ಪವಿತ್ರಾತ್ಮರು ಬಂದ ನಂತರ ಅವರ ಬದುಕೇ ಬದಲಾಯಿತು. ಅವರ ಬಲಹೀನತೆಗಳು ಮತ್ತು ಸಮಸ್ಯೆಗಳು ಸಂಪೂರ್ಣವಾಗಿ ಮಾಯವಾಗದಿದ್ದರೂ ಅವರು ಮೊದಲಿನಂತೆ ಅವುಗಳ ಕುರಿತು ಭಯಭೀತರಾಗಿಲ್ಲ ಅಥವಾ ಅವರ ಮೇಲೆ ದಾಷ್ಟ್ರ್ಯದಿಂದ ಎರಗುವವರ ಕುರಿತೂ ಅವರು ಭಯಪಡಲಿಲ್ಲ. ಬದಲಿಗೆ ಅವರು ತಮ್ಮೊಳಗೆ ದೇವರ ಸಾಂತ್ವನ, ಸಹಾನುಭೂತಿ ಹಾಗೂ ಬೆಂಬಲವನ್ನು ಅನುಭವಿಸಿದರು. ಇದನ್ನೇ ಅವರು ಇತರರೊಂದಿಗೆ ಹಂಚಿಕೊಂಡರು ಹಾಗೂ ದೇವರಿಂದ ಪಡೆದ ಪ್ರೀತಿಗೆ ಸಾಕ್ಷಿಗಳಾದರು.” ಎಂದು ಪೋಪ್ ತಮ್ಮ ಪ್ರಭೋದನೆಯಲ್ಲಿ ಹೇಳಿದರು.


ಪೋಪ್ ಫ್ರಾನ್ಸಿಸ್ ತಮ್ಮ ಮಾತುಗಳನ್ನು ಮುಂದುವರೆಸುತ್ತಾ “ಇಂದು ನಾವೂ ಸಹ ನಮ್ಮ ಜಗತ್ತಿನಲ್ಲಿ ಉಪಶಮಿಕರಾಗಲು, ಆತ್ಮರು ತರುವ ಸಾಂತ್ವನವನ್ನು ಸಾಕಾರಗೊಳಿಸಲು ಪವಿತ್ರಾತ್ಮರಲ್ಲಿ ಸಾಕ್ಷಿಗಳಾಗಬೇಕಿದೆ. ಇದನ್ನು ನಾವು ಕೇವಲ ಒಳ್ಳೆಯ ಮಾತುಗಳಿಂದ ಮಾತ್ರವಲ್ಲದೆ ‘ಪ್ರಾರ್ಥನೆ ಮತ್ತು ನಿಕಟತೆ’ ಯಿಂದ “ಇತರರಿಗೆ ಹತ್ತಿರವಾಗುವ” ಮೂಲಕ ಮಾಡಬಹುದು. ಕೇವಲ ನಕಾರಾತ್ಮಕವಾದುದನ್ನು ಮಾತ್ರ ಒತ್ತಿಹೇಳದೆ, ಸಕಾರಾತ್ಮಕವಾಗಿಯೂ ಚಿಂತಿಸಬೇಕು” ಎಂದು ಹೇಳಿದ ಪೋಪ್ “ಸಂತೋಷಭರಿತರಾಗಿ ಶುಭಸಂದೇಶವನ್ನು ಜಗತ್ತಿಗೆ ಸಾರಬೇಕು” ಮತ್ತು ಈ ಮೂಲಕ “ದೇವರ ಕರುಣೆಗೆ ಸಾಕ್ಷಿಗಳಾಗಬೇಕು” ಎಂದು ಹೇಳಿದರು.


ಪ್ರತಿಪಾದಕರಾಗಿ ಪವಿತ್ರಾತ್ಮರು


ತಮ್ಮ ಪ್ರಬೋಧನೆಯ ಎರಡನೇ ಮುಖ್ಯಾಂಶದ ಕುರಿತು ಮಾತನಾಡಿದ ಪೋಪ್ ‘ಪ್ಯಾರಕ್ಲೀಟ್’ ಪದವನ್ನು ‘ಪ್ರತಿಪಾದಕ’ ಎಂದು ಅರ್ಥೈಸಿರುವುದರ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. “ಸತ್ಯಾತ್ಮರಾದ ಪವಿತ್ರಾತ್ಮರು ನಮ್ಮ ಆಲೋಚನೆಗಳು ಮತ್ತು ಅನುಭವಗಳಿಗೆ ಸ್ಪೂರ್ತಿ ನೀಡುವುದರ ಮೂಲಕ ಸೈತಾನನ ಕಪಟತೆಯಿಂದ ನಮ್ಮನ್ನು ರಕ್ಷಿಸುತ್ತಾರೆ. “ಆತ್ಮರು ಪ್ರಸ್ತಾಪಿಸುತ್ತಾರೆಯೇ ವಿನಃ ನಮ್ಮ ಮೇಲೆ ಯಾವುದನ್ನೂ ಹೇರಿಕೆ ಮಾಡುವುದಿಲ್ಲ. ಆದರೆ ದುರಾತ್ಮವು ನಮ್ಮನ್ನು ಶೋಧನೆಗೆ ಒಳಗಾಗುವಂತೆ ಪ್ರೇರೇಪಿಸುತ್ತದೆ.” ಎಂದು ನುಡಿದರು ಪೋಪ್ ಫ್ರಾನ್ಸಿಸ್.


ಇಲ್ಲಿ ನಮಗೆ ಮೂರು ವಿಧದ ಪ್ರತಿರೋಧಕಗಳಿವೆ ಎಂದು ಹೇಳಿದ ಪೋಪ್ ಫ್ರಾನ್ಸಿಸ್. “ಮೊದಲಿಗೆ, ನಾವು ನಮ್ಮ ಹಿಂದಿನ ತಪ್ಪುಗಳಿಗೆ ಜೋತು ಬೀಳುವುದಾಗಲಿ ಅಥವಾ ಭವಿಷ್ಯದ ಭಯದಿಂದ ಆತಂಕಪಡುವುದಾಗಲಿ ಮಾಡದೆ ವರ್ತಮಾನದಲ್ಲಿ ಜೀವಿಸಬೇಕೆಂದು ಪವಿತ್ರಾತ್ಮರು ನಮಗೆ ಕರೆ ನೀಡುತ್ತಾರೆ. ವರ್ತಮಾನಕ್ಕಿಂತ ಒಳ್ಳೆಯ ಸಮಯ ಬೇರೊಂದಿಲ್ಲ” ಎಂದ ಪೋಪ್ ಫ್ರಾನ್ಸಿಸ್ “ಇದು ಇತರರಿಗೆ ಒಳ್ಳೆಯದನ್ನು ಮಡಲು ಇರುವ ಒಂದೇ ಒಂದು ಸಮಯವಾಗಿದೆ ಮಾತ್ರವಲ್ಲದೆ, ನಮ್ಮ ಜೀವನವನ್ನೇ ‘ಉಡುಗೊರೆ’ ಯಾಗಿ ಪರಿವರ್ತಿಸಬಹುದಾದ ಸಮಯ.” ಎಂದರು.


“‘ನಮ್ಮತನವನ್ನು ಮೀರಿ ಆಲೋಚಿಸುವಂತೆ’, ವಿವಿಧ ಧ್ಯೇಯಗಳನ್ನೊಳಗೊಂಡ ಒಂದೇ ಧರ್ಮಸಭೆಯಾಗಿ, ‘ಒಗ್ಗಟ್ಟಾಗಿರುವ ಆದರೆ ಎಂದೂ ಏಕಪ್ರಕಾರತೆಯನ್ನು’ ಹೊಂದಿರದೆ ‘ಸಮಸ್ತವನ್ನೂ ನೋಡುವಂತೆ” ಪವಿತ್ರಾತ್ಮರು ನಮಗೆ ಕರೆನೀಡುತ್ತಾರೆ. ಪ್ರೇಷಿತರ ಮೇಲೆ ಅತ್ಮರು ಇಳಿದು ಬಂದ ನಂತರ ಅವರು ವೈವಿಧ್ಯಮಯ ಜೀವಿಗಳಾಗಿ ಹೊಸ ಹೊಸ ಚಿಂತನೆ, ಆಲೋಚನೆ ಹಾಗೂ ಪ್ರತಿಭೆಗಳನ್ನು ಹೊಂದಿದಂತೆ, ಆತ್ಮರು ಕ್ರಿಯಾಶೀಲರಾಗಿ ನಮ್ಮ ಸಮುದಾಯಗಳಿಗೆ ಹೊಸತನವನ್ನು ತರುತ್ತಾರೆ. ಪ್ರೇಷಿತರು ಪವಿತ್ರಾತ್ಮರನ್ನು ಪಡೆದ ನಂತರ ದೇವರ ಯೋಜನೆಯಾದ ‘ಸಮಸ್ತ’ಕ್ಕೆ ಪ್ರಾಮುಖ್ಯತೆಯನ್ನು ನೀಡಿದರು. ನಾವು ಪವಿತ್ರಾತ್ಮರಿಗೆ ಕಿವಿಗೊಟ್ಟರೆ ಸಾಕು, ನಾವು ನಮ್ಮ ಎಲ್ಲಾ ವ್ಯತ್ಯಾಸಗಳನ್ನು ಮೀರಿ ಆಲೋಚಿಸಬಹುದು ಮತ್ತು ಏಕತೆ, ಹೊಂದಾಣಿಕೆ ಮತ್ತು ವೈವಿಧ್ಯತೆಯ ಸಾಮರಸ್ಯದ ಕರೆಯನ್ನು ಒಪ್ಪಿಕೊಳ್ಳಬಹುದು” ಎಂದರು ಪೋಪ್.


ಅಂತಿಮವಾಗಿ, “‘ಆತ್ಮರು ನಮ್ಮನ್ನು ದೇವರಿಗಾಗಿ ಮುಗ್ಧತೆಯಿಂದ ಮುಕ್ತವಾಗಿ ತೆರೆದುಕೊಳ್ಳುವಂತೆ’ ಕರೆನೀಡುತ್ತಾರಲ್ಲದೆ, “ನಮಗೂ ಮೊದಲು ದೇವರಿಗೆ ಪ್ರಥಮ ಸ್ಥಾನವನ್ನು ನೀಡಬೇಕೆಂದು” ನಮ್ಮನ್ನು ಹುರಿದುಂಬಿಸುತ್ತಾರೆ.” ಎಂದು ನುಡಿದ ಪೋಪ್ ಫ್ರಾನ್ಸಿಸ್ “ಆತ್ಮರು ವರದಾನಗಳ ಪ್ರಾಮುಖ್ಯತೆಯ ಕುರಿತು ದೃಢೀಕರಿಸುತ್ತಾರೆ. ನಾವು ನಮ್ಮನ್ನೇ ಬರಿದು ಮಾಡಿಕೊಂಡು, ಕ್ರಿಸ್ತರಿಗೆ ನಮ್ಮಲ್ಲಿ ಸ್ಥಳವನ್ನು ಕಾಯ್ದಿರಿಸಬೇಕು. ಹೀಗೆ ಮಾಡುವುದರ ಮೂಲಕ ಮಾತ್ರ ನಾವು ನಿಜವಾಗಿಯೂ ನಮ್ಮನ್ನು ಕಂಡುಕೊಳ್ಳುತ್ತೇವೆ ಹಾಗೂ ಪವಿತ್ರಾತ್ಮರಲ್ಲಿ ಸಮೃದ್ಧರಾಗುತ್ತೇವೆ.” ಎಂದರು. ಮುಂದುವರೆದು ಮಾತನಾಡಿದ ಅವರು “ಇದು ಧರ್ಮಸಭೆಯ ವಿಷಯದಲ್ಲಿಯೂ ಸತ್ಯ. ನಾವು ನಮ್ಮ ಯೋಜನೆ ಮತ್ತು ಆಲೋಚನೆಗಳಲ್ಲಿ ಕಳೆದುಹೋಗದೆ, ಇತರರಿಗೆ ಮಿಡಿಯುವಂತಾಗಬೇಕು. ಧರ್ಮಸಭೆ ಒಂದು ಮಾನವ ನಿರ್ಮಿತ ಸಂಸ್ಥೆಯಲ್ಲ, ಬದಲಿಗೆ ಇದು ಪವಿತ್ರಾತ್ಮರ ದೇವಾಲಯ” ಎಂಬುದನ್ನು ಸದಾ ನೆನಪಿಟ್ಟುಕೊಳ್ಳಬೇಕು.” ಎಂದರು.


ತಮ್ಮ ಪ್ರಬೋಧನೆಯನ್ನು ಮುಕ್ತಾಯಗೊಳಿಸುತ್ತಾ ಪ್ರಾರ್ಥಿಸಿದ ಪೋಪ್, “ಸಮಸ್ತವನ್ನೂ ಸೃಷ್ಟಿಸಿ ನವೀಕರಿಸುವ ದೇವರ ವರದಾನದಲ್ಲಿ ಪ್ರೇಷಿತರು ತಳವೂರಿದಂತೆ, ನಮ್ಮ ಪ್ರತಿಪಾದಕರು ಹಾಗೂ ನಮ್ಮಾತ್ಮದ ಆಪ್ತ ಸಮಾಲೋಚಕರಾದ ಪವಿತ್ರಾತ್ಮರೇ, ‘ಇಂದು’ ನಾವು ದೇವರ ಸಾಕ್ಷಿಗಳಾಗುವಂತೆ ಹಾಗೂ ಧರ್ಮಸಭೆ ಮತ್ತು ಮನುಷ್ಯಕುಲಕ್ಕೆ ಏಕತೆಯ ಪ್ರವಾದಿಗಳಾಗುವಂತೆ ಕರುಣಿಸಿರಿ.” ಎಂದರು.


23 ಮೇ 2021, 10:50

30 views0 comments

Comments


bottom of page