top of page

ಬಲಿಪೂಜೆ ಕುರಿತ ಪಠ್ಯದ ಪರ ಮತ ಚಲಾಯಿಸಿದ ಅಮೇರಿಕ ಧರ್ಮಾಧ್ಯಕ್ಷರು


ವ್ಯಾಟಿಕನ್ ಸಿಬ್ಬಂದಿ ಬರಹಗಾರ


ಯು ಎಸ್ ಧರ್ಮಾಧ್ಯಕ್ಷರುಗಳ ಸಭೆ ತಮ್ಮ ವಸಂತ ಋತುವಿನ ಸಾಮಾನ್ಯ ಸಭೆಯಲ್ಲಿ ಧರ್ಮಸಭೆಯ ಬದುಕಿನಲ್ಲಿ ಬಲಿಪೂಜೆಯು ಎಷ್ಟರ ಮಟ್ಟಿಗೆ ಅರ್ಥೈಸಿಕೊಳ್ಳುತ್ತದೆ ಎಂಬುದರ ಬಗ್ಗೆ ಬೆಳಕನ್ನು ಚೆಲ್ಲುವ ಪಠ್ಯವೊಂದರ ಕರಡನ್ನು ತಯಾರಿ ಮಾಡಲು ಅನುಮೋದನೆ ನೀಡಿದ್ದಾರೆ. ಧರ್ಮಸಭೆ ಕುರಿತಾದ ಹಲವಾರು ಸಮಸ್ಯೆಗಳನ್ನು ವಿಮರ್ಶಿಸಿದ ಮೂರು ದಿನದ ಸಭೆಯ ಕೊನೆಯ ದಿನದಂದು ಪಠ್ಯವನ್ನು ಸಿದ್ಧಪಡಿಸಬೇಕೆಂದು ಸಹಮತದ ಮೂಲಕ ಸಮ್ಮತಿಸಲಾಯಿತು.


ಯುಎಸ್ ನ ಧರ್ಮಾಧ್ಯಕ್ಷರುಗಳು ಜೂನ್ 16 ರಿಂದ 18ರ ವರೆಗೂ ತಮ್ಮ ವಾರ್ಷಿಕ ವಸಂತ ಋತುವಿನ ಸಾಮಾನ್ಯ ಸಭೆಯಲ್ಲಿ ಆನ್ಲೈನ್ ವೇದಿಕೆಯಲ್ಲಿ ಭಾಗವಹಿಸಿದರು. ಸಭೆಯ ಅಂತಿಮ ದಿನದಂದು ಧರ್ಮಸಭೆಯ ಬದುಕಿನಲ್ಲಿ ಬಲಿಪೂಜೆಯ ಮಹತ್ವ ಏನಿದೆ ಎಂಬ ಮುಖ್ಯ ವಿಷಯದ ಬಗ್ಗೆ ಪಠ್ಯವನ್ನು ಸಿದ್ಧಪಡಿಸುವಲ್ಲಿ ಸಹಮತ ಯಾಚನೆ ನಡೆಯಿತು. ಪಠ್ಯದ ಪರವಾಗಿ 168 ಮತಗಳು, ವಿರುದ್ಧವಾಗಿ 55 ಮತಗಳು ಬಂದರೆ 6 ಜನರು ಮತ ನಿರಾಕರಣೆಯ ಮೊರೆ ಹೋದರು. ವಿಷಯದ ಪರವಾಗಿ ಬಹುಮತ ಇದ್ದುದರಿಂದ ಧರ್ಮಾಧ್ಯಕ್ಷಿಯ ಬೋಧನಾ ಸಮಿತಿಯು ಪಠ್ಯ ಸಿದ್ಧಪಡಿಸುವ ಕೆಲಸವನ್ನು ಆರಂಭಿಸಬಹುದು. ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯುವ ಸಭೆಯಲ್ಲಿ ಪಠ್ಯವನ್ನು ಮಂಡಿಸುವ ಸಾಧ್ಯತೆ ಇದೆ.


ಮತದಾನದ ಮೊದಲು ವಿಷಯದ ಬಗ್ಗೆ ಆಸಕ್ತಿಕರ ಚರ್ಚೆ ನಡೆಯಿತು. ಹಲವಾರು ಮಂದಿ ಪ್ರಸ್ತುತ ಕಾಲಕ್ಕೆ ಕಲಿಕಾ ಪಠ್ಯದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರೆ, ಇನ್ನಿತರರು ಈ ವಿಷಯವನ್ನು ರಾಜಕೀಯವೆಂಬಂತೆ ತೋರ್ಪಡಿಸಿದಲ್ಲಿ ಕಥೋಲಿಕರ ನಡುವಿನ ಒಗ್ಗಟ್ಟಿಗೆ ಧಕ್ಕೆ ಬರಬಹುದು ಎಂದು ತಮ್ಮ ಹಿಂಜರಿಕೆಯನ್ನು ವ್ಯಕ್ತಪಡಿಸಿದರು. ಪಠ್ಯದ ಪರವಹಿಸಿದವರು ಇದು ಪ್ರಚಲಿತದಲ್ಲಿರುವ ಬಹು-ವಾರ್ಷಿಕ ರಾಷ್ಟ್ರೀಯ ಬಲಿಪೂಜನಾ ನವೀಕರಣ ಕಾರ್ಯದಲ್ಲಿ ಚೆನ್ನಾಗಿ ಮೂಡಬಲ್ಲದು ಎಂದು ಅಭಿಪ್ರಾಯ ಪಟ್ಟರು. ಈ ನವೀಕರಣ ಕಾರ್ಯವು “ಕ್ರಿಸ್ತರ ಶರೀರ ಮತ್ತು ರಕ್ತದಿಂದ ಹೊಸದಾಗಿ ರಚಿಸಲ್ಪಟ್ಟಿದ್ದು – ಉಪಶಮನ ಮತ್ತು ನಂಬಿಕೆಯ ಮೂಲ” ಎಂಬ ಶೀರ್ಷಿಕೆಯನ್ನೊಳಗೊಂಡ United States Conference for Catholic Bishops (USCCB) ಯ ಮಹತ್ವದ ಯೋಜನೆಯ ಭಾಗವಾಗಿದೆ. ಪಠ್ಯ ವಿಷಯದ ವಿರುದ್ಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ವಾಷಿಂಗ್ಟನ್ ಕಾರ್ಡಿನಲ್ ವಿಲ್ಟನ್ ಗ್ರೆಗೊರಿ ಅವರು ಈಗಾಗಲೇ ಧರ್ಮಾಧ್ಯಕ್ಷರುಗಳ ದೃಷ್ಟಿ ಕೋನಗಳ ನಡುವೆ ಇರುವ ಗೊಂದಲಗಳು ಹೆಚ್ಚಾಗಲಿವೆ. ಇದರಿಂದಾಗಿ USCCB ಹಾಗು ಧರ್ಮಸಭೆಯ ಒಗ್ಗಟ್ಟಿಗೆ ಧಕ್ಕೆಯಾಗಲಿದೆ ಎಂದು ಹೇಳಿದರು.

ಜೂನ್ 16 ರಂದು ಮಹಾಧರ್ಮಾಧ್ಯಕ್ಷರಾದ ಯುಎಸ್ ನ ಪ್ರೇಷಿತ ರಾಯಭಾರಿ ಕ್ರಿಸ್ಟೋಫ್ ಪಿಯರ್ರೆ ವಿಶ್ವಗುರು ಫ್ರಾನ್ಸಿಸ್ ಅವರ ಸಂಪೂರ್ಣ ಸಹಕಾರ ಎಲ್ಲ ಧರ್ಮಾಧ್ಯಕ್ಷರಿಗೆ ಇದೆ ಎಂಬ ಭರವಸೆಯೊಂದಿಗೆ ಸಭೆಗೆ ಚಾಲನೆ ನೀಡಿದರು. ಅವರ ಪ್ರಾಸ್ತಾವಿಕ ನುಡಿಗಳು ಒಗ್ಗಟ್ಟಿನ ವಿಷಯದ ಬಗ್ಗೆ ಕೇಂದ್ರೀಕೃತವಾಗಿದ್ದವು. ಯುಎಸ್ ನ ಧರ್ಮಸಭೆಗೆ ಹೊಸ ಕಾರ್ಯಕ್ರಮವನ್ನು ಹುಟ್ಟು ಹಾಕುವ ಅಗತ್ಯ ಇಲ್ಲ, ಬೈಬಲ್ ಗ್ರಂಥದಲ್ಲಿ ಹಾಗು ಜೀವಂತ ಪರಂಪರೆಯಲ್ಲಿರುವ ಯೋಜನೆಯಲ್ಲಿ ಕಾರ್ಯಕ್ರಮ ಈಗಾಗಲೇ ನೆಲೆಯೂರಿದೆ ಎಂದು ಅಭಿಪ್ರಾಯ ಪಟ್ಟರು.


ಅವರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ “ ಕ್ರೈಸ್ತ ಧರ್ಮ ಕೇವಲ ಆಚಾರಗಳಿಗೆ, ಸದಾಚಾರದ ಕಟ್ಟುಪಾಡುಗಳಿಗೆ, ಸಾಮಾಜಿಕ ಆಚರಣೆಗಳಿಗೆ ಮೀಸಲಾದಾಗ ಅದರ ಶ್ರೇಷ್ಠತೆಯನ್ನು ಕಳೆದುಕೊಳ್ಳುತ್ತದೆ. ಜನರ ಬದುಕಿನ ಆಶಯಗಳನ್ನು ಸಡಿಲಗೊಳಿಸುತ್ತದೆ. ಮುಖ್ಯವಾಗಿ ಲೋಕ ಪೀಡಿತ ಕೊರೋನಾದ ಬಾಧೆಯಿಂದ ಹೊರಬಂದು ಭರವಸೆಯ ಬೆಳಕನ್ನು ಎದುರು ನೋಡುತ್ತಿರುವವರ, ಜನಾಂಗೀಯ ನಿಂದನೆ ಅನುಭವಿಸಿ ಸಾಮಾಜಿಕ ನ್ಯಾಯವನ್ನು ಹುಡುಕುತ್ತಿರುವವರ, ಉಜ್ವಲ ಹಾಗೂ ಸುರಕ್ಷಿತವಾದ ಭವಿಷ್ಯವನ್ನು ಬಯಸುತ್ತಿರುವವರ ಜೀವನದ ಹಿತಾಸಕ್ತಿಯನ್ನು ಹಾನಿಗೊಳಿಸುತ್ತದೆ” ಎಂದು ನುಡಿದರು.


ಕ್ರೈಸ್ತ ನಂಬಿಕೆ ಕೇವಲ ಸಾಂಸ್ಕೃತಿಕ ಸಂಪ್ರದಾಯವಲ್ಲ. ರಾಜಕೀಯ ಹಾಗೂ ಸೈದ್ಧಾಂತಿಕ ತತ್ವಗಳನ್ನೊಳಗೊಂಡ ಇತರ ವ್ಯವಸ್ಥೆಗಳಿಗಿಂತ ಭಿನ್ನವಾದುದು. ಯಾಕೆಂದರೆ, ಕ್ರೈಸ್ತ ಧರ್ಮ ಸಮಾಜ ಸೇವಾ ಸಂಸ್ಥೆಗಳನ್ನು ಮೀರಿದ್ದು. ಧರ್ಮಸಭೆ ಕ್ರಿಸ್ತ ಮಾನವನಲ್ಲಿ ಪಶ್ಚಾತ್ತಾಪ ಹಾಗೂ ಪರಮಪ್ರಸಾದ ಸಂಸ್ಕಾರಗಳ ಮೂಲಕ ರಕ್ಷಣೆಯನ್ನು ನೀಡುತ್ತದೆ ಎಂದು ನೆನೆದರು.


ಪರಮಪ್ರಸಾದದ ಸಂಸ್ಕಾರ ಸ್ವೀಕರಿಸಲ್ಪಡುವ ವಸ್ತು ಮಾತ್ರವಲ್ಲ. ಬದಲಾಗಿ ಕ್ರಿಸ್ತನನ್ನು ಮುಖಾಮುಖಿಯಾಗಿ ಭೇಟಿಯಾಗುವ ದೈವೀ ಅನುಭವ. ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ ಹಾಗು ಭಾವನಾತ್ಮಕವಾಗಿ ನೊಂದಿರುವವರ ಜೊತೆಜೊತೆಯಾಗಿ ‘ಚಿಂತನಾಪರ ಸಂಭಾಷಣೆ’ಯ ಮೂಲಕ ಕ್ರಿಸ್ತನನ್ನು ಎದುರುಗೊಳ್ಳುವುದಾಗಿದೆ. ಈ ಸಂಭಾಷಣೆಯ ಗುರಿ – ವಿಶ್ವಾಸಿಗಳ ಒಗ್ಗಟ್ಟನ್ನು ಮೂಡಿಸಬೇಕು, ಸ್ಥಳೀಯ ಧರ್ಮಸಭೆಗಳ ನಡುವೆ ಅನ್ಯೋನ್ಯ ಭಾವವನ್ನು ಹೊರ ಹೊಮ್ಮಿಸಬೇಕು ಎಂದು ಪ್ರೇಷಿತ ರಾಯಭಾರಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.


USCCB ಅಧ್ಯಕ್ಷರಾದ ಮಹಾ ಧರ್ಮಾಧ್ಯಕ್ಷ ಗೊಮ್ಸ್ ಅವರು ತಮ್ಮ ಮುನ್ನುಡಿಯಲ್ಲಿ ‘ಒಡಕುಗಳ ಒತ್ತಡ’ ಬಲವಾಗಿದ್ದರೂ ಸಂಭಾಷಣೆ ಹಾಗೂ ಸಾಮರಸ್ಯದ ಅವಶ್ಯಕತೆ ಇದೆ ಎಂದು ಅದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಮಾಜ ಛಿದ್ರ ಛಿದ್ರವಾಗಿರುವಾಗ ದೇವರು ತಮ್ಮ ಸೃಷ್ಟಿಗೆ ಹಾಗೂ ತನ್ನ ಜನರಿಗೆ ಬಯಸುವ ಸಾಮರಸ್ಯದ ಕಾರ್ಯದಲ್ಲಿ ಧರ್ಮಸಭೆಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದರು. ಕೊರೋನಾ ಪೀಡಿತ ಸವಾಲುಗಳನ್ನು ಮೆಲುಕು ಹಾಕುತ್ತಾ, “ಒಂದಾಗಿರುವ ಧರ್ಮಸಭೆ ಮಾತ್ರ ಮುರಿದು ಹೋದ ಸಮಾಜವನ್ನು ಕಟ್ಟಬಲ್ಲದು, ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಬಲ್ಲದು. ನಾವು ಸಾರುವ ಶುಭ ಸಂದೇಶ ರಕ್ಷಣಾ ಕಾರ್ಯದ ಸತ್ಯ. ಮಾನವೀಯ ಘನತೆ ಹಾಗೂ ಏಳಿಗೆಯನ್ನು ಸಾಕಾರಗೊಳಿಸಲು ಇತಿಹಾಸ ಕಂಡ ಬಹು ಬಲಿಷ್ಠವಾದ ಶಕ್ತಿ - ಇದೆ ಶುಭಸಂದೇಶ” ಎಂದು ವಿಮರ್ಶಿಸಿದರು.


19 ಜೂನ್ 2021, 12:36


ಕನ್ನಡಕ್ಕೆ: ಸುನೀಲ್ ಜಿ ಕೆ

23 views0 comments

Comments


bottom of page