ಮ್ಯಾನ್ಮಾರ್ ಮಿಲಿಟರಿ ದಾಳಿಗೆ ಮತ್ತೊಂದು ಚರ್ಚ್ ಧ್ವಂಸ


ಜೂನ್ 6 ರಂದು ಮ್ಯಾನ್ಮಾರ್‍ನ ಶಾಂತಿಯ ಮಾತೆ ದೇವಾಲಯದ ಮೇಲೆ ನಡೆದ ದಾಳಿಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಆದರೆ, ಚರ್ಚಿನ ಒಂದು ಭಾಗದ ಗೋಡೆಗಳಿಗೆ ಹಾಗೂ ಹಲವು ಕಿಟಕಿಗಳಿಗೆ ಹಾನಿಯಾಗಿದೆ.


ವರದಿ: ರಾಬಿನ್ ಗೋಮ್ಸ್


ಮ್ಯಾನ್ಮಾರ್‍ನಲ್ಲಿ ಮಿಟಿಟರಿ ದಾಳಿಗೆ ಮತ್ತೊಂದು ಕಥೋಲಿಕ ಚರ್ಚು ಧ್ವಂಸಗೊಂಡ ಪ್ರಕರಣ ನಡೆದಿದೆ. ವಿಪರ್ಯಾಸವೆಂದರೆ, ಖಯಾ ರಾಜ್ಯದಲ್ಲಿರುವ ಡಾಗಾನ್ ಖಾ ಎಂಬ ಪ್ರದೇಶದಲ್ಲಿರುವ ಈ ಚರ್ಚಿನ ಹೆಸರು ಶಾಂತಿಯ ಮಾತೆ ದೇವಾಲಯವಾಗಿದೆ. ಭಾನುವಾರ ಈ ಚರ್ಚಿನ ಮೇಲೆ ನಡೆದ ದಾಳಿ ನಡೆಯುವ ಮುನ್ಸೂಚನೆ ತಿಳಿದ ಈ ಧರ್ಮಕೇಂದ್ರದ ಭಕ್ತಾಧಿಗಳು ಕೂಡಲೇ ಅಲ್ಲಿಂದ ಪಾರಾಗಿ, ಕಾಡಿನಲ್ಲಿ ಅವಿತುಕೊಂಡ ಪರಿಣಾಮ ಅದೃಷ್ಟವಶಾತ್ ಯಾವುದೇ ಸಾವು - ನೋವುಗಳು ಸಂಭವಿಸಿಲ್ಲ. ಆದರೆ, ಈ ದಾಳಿಗೆ ಚರ್ಚಿನ ಗೋಡೆಗಳು ಹಾಗೂ ಕಿಟಕಿಗಳಿಗೆ ಹಾನಿಯಾಗಿ ಜಖಂಗೊಂಡಿವೆ. ಚರ್ಚಿನ ಕಾಂಪೌಂಡು ವಿಶಾಲವಾಗಿದ್ದು, ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತಿರುವ ಕಾರಣ ಇದು ಯೋಜಿಸಿ ನಡೆಸಿದ ಕೃತ್ಯವೆಂದೇ ಹೇಳಬಹುದು. ಚರ್ಚಿನ ಮೇಲೆ ಆದ ದಾಳಿಯ ಪರಿಣಾಮ ಚರ್ಚಿನ ಪಕ್ಕದಲ್ಲಿದ ಮನೆಗಳಿಗೂ ಸಹ ಹಾನಿಯುಂಟಾಗಿದೆ.


ಖಾಯಾ ರಾಜ್ಯದಲ್ಲಿ ಚರ್ಚ್‍ಗಳ ಮೇಲೆ ನಡೆಯುತ್ತಿರುವ ಮೂರನೇ ದಾಳಿ


ಖಾಯಾ ರಾಜ್ಯದಲ್ಲಿ ಎರಡು ವಾರದ ಅವಧಿಯಲ್ಲಿ ಶಾಂತಿಮಾತೆಯ ದೇವಾಲಯ ಮಿಲಿಟರಿ ದಾಳಿಗೆ ಒಳಗಾದ ಮೂರನೇ ಚರ್ಚ್ ಆಗಿದೆ. ಮೇ 23 ರ ರಾತ್ರಿ ಲೋಯ್ಕೋ ಪ್ರದೇಶಕ್ಕೆ ಹತ್ತಿರವಿರುವ ಕಯಂತ್ಯಾರ್ ಹಳ್ಳಿಯಲ್ಲಿರುವ ಪವಿತ್ರ ಹೃದಯದ ದೇವಾಲಯದ ಮೇಲೆ ನಡೆದ ಮಿಲಿಟರಿ ಆರ್ಟಿಲರಿ ದಾಳಿಯಲ್ಲಿ ನಾಲ್ಕು ಜನ ಕಥೋಲಿಕರು ಅಸುನೀಗಿದರಲ್ಲದೆ, ಎಂಟು ಜನರು ಗಾಯಾಳುಗಳಾಗಿದ್ದಾರೆ. ಡೆಮೊಸೊ ಪಟ್ಟಣದಲ್ಲಿರುವ ಸಂತ ಜೋಸೆಫರ ಚರ್ಚಿನ ಮೇಲೆ ಮೇ ತಿಂಗಳು 26 ರಂದು ರಾತ್ರಿ ಮಿಲಿಟರಿ ದಾಳಿ ನಡೆದಿತ್ತು. ಇದಕ್ಕೂ ಮೊದಲು ಖಾಯಾದ ಜೆರೊಬ್ಲೋನಲ್ಲಿನ ಮಾತೆ ಮರಿಯಮ್ಮನವರ ದೇವಾಲಯದ ಮೇಲೆ ದಾಳಿ ನಡೆದಿತ್ತಾದರೂ ಅದು ಅಧಿಕೃತವಾಗಿ ಇನ್ನೂ ದೃಢೀಕೃತವಾಗಿಲ್ಲ.


ವ್ಯಾಟಿಕನ್ನಿನ ಫಿದೇಸ್ ನ್ಯೂಸ್ ಏಜೆನ್ಸಿ ಪ್ರಕಾರ ಖಾಯಾ ರಾಜ್ಯದ ಶೇಕಡ 75 ರಷ್ಟು ಜನರು ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳಿಗೆ ಸೇರಿದವರಾಗಿದ್ದಾರೆ. ಇದಲ್ಲದೆ ಈ ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗ ಕ್ರೈಸ್ತರೇ ಆಗಿದ್ದಾರೆ. ಈ ರಾಜ್ಯದ ಒಟ್ಟಾರೆ 355,000 ಜನರಲ್ಲಿ 90,000 ಕ್ರೈಸ್ತರಿದ್ದಾರೆ. ಕಥೋಲಿಕ ಧರ್ಮಸಭೆಯ ಸಾಮಾಜಿಕ ಸೇವೆಯ ಅಂಗಸಂಸ್ಥೆಯಾದ “ಕಾರಿತಾಸ್” ಇತರೆ ದಾನಿಗಳು ಹಾಗೂ ಸಂಸ್ಥೆಗಳ ಜೊತೆಗೂಡಿ ಈ ಸಂಘರ್ಷ ಮತ್ತು ಹಿಂಸೆಗೆ ತುತ್ತಾಗಿ ತಮ್ಮ ನೆಲೆಯನ್ನು ಕಳೆದುಕೊಂಡಿರುವ ಸುಮಾರು 300000 ಜನರಿಗೆ ನೆರವು ನೀಡುವಲಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜನಾಂಗೀಯ ಸಂಘರ್ಷದ ಮರು ಉಗಮ


ಫೆಬ್ರವರಿ 1 ರಂದು ಅಲ್ಲಿನ ಮಿಲಿಟರಿ ದಂಗೆ ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ಉಚ್ಛಾಟಿಸಿದಾಗಿನಿಂದ ದಕ್ಷಿಣ ಏಷ್ಯಾದ ಈ ಬಡ ರಾಷ್ಟ್ರದಲ್ಲಿ ಅರಾಜಕತೆಯೇ ತಾಂಡವವಾಡುತ್ತಿದೆ. ಈ ದಂಗೆಯ ವಿರುಧ್ಧದ ಪ್ರತಿಭಟನೆ ಮತ್ತು ಚಳುವಳಿಗಳು ಈ ದೇಶದ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿವೆ.


ಭೌದ್ಧರೇ ಬಹುಸಂಖ್ಯಾತರಾಗಿರುವ ಈ ದೇಶದ 54 ಮಿಲಿಯನ್ ಜನಸಂಖ್ಯೆಯ ಶೇಕಡ 6.2 ರಷ್ಟು ಕ್ರೈಸ್ತರಿದ್ದಾರೆ. ಇನ್ನು 1.5 ರಷ್ಟು ಕಥೋಲಿಕರು ಈ ದೇಶದಲ್ಲಿದ್ದಾರೆ.


ಈ ಭಿಕ್ಕಟ್ಟು ಮ್ಯಾನ್ಮಾರ್‍ನ ಮಿಲಿಟರಿ ಹಾಗೂ ಕೆಲವು ಸಶಸ್ತ್ರ ಜನಾಂಗೀಯ ಸಂಘಟನೆಗಳ ನಡುವಿನ ಹಳೆಯ ವೈಷಮ್ಯಕ್ಕೆ ಮತ್ತೆ ಕಿಡಿ ಹಚ್ಚಿದೆ. ಹಲವು ಜನಾಂಗೀಯ ಗುಂಪುಗಳು ವಶಪಡಿಸಿಕೊಂಡಿರುವ ಹಲವು ದಶಕಗಳ ಕಾಲ ಶೋಷಣೆಯನ್ನು ಅನುಭವಿಸಿದ ಕಚಿನ್, ಚಿನ್, ಕಾರೆನ್, ಮತ್ತು ಖಾಯಾ ಪ್ರದೇಶಗಳು ಕ್ರೈಸ್ತ ಬಾಹುಳ್ಯವಿರುವ ಪ್ರದೇಶಗಳಾಗಿವೆ. ಪ್ರಸಕ್ತ ಮ್ಯಾನ್ಮಾರ್‍ನ ಮೂರನೇ ಒಂದು ಭಾಗವು – ವಿಶೇಷವಾಗಿ ಗಡಿ ಪ್ರದೇಶಗಳು – 20 ಜನಾಂಗೀಯ ಸಂಘಟನೆಗಳ ಮುಷ್ಠಿಯಲ್ಲಿದ್ದು, ಈ ಸಂಘಟನೆಗಳು ಈ ಪ್ರದೇಶವನ್ನು ನಿಯಂತ್ರಿಸುತ್ತಿದ್ದಾರೆ. ತಮ್ಮ ವಿರುಧ್ಧ ಸೆಣಸುತ್ತಿರುವ ಗೆರಿಲ್ಲಾಗಳು ಹಾಗೂ ದಂಗೆ ವಿರೋಧಿಗಳ ಹುಟ್ಟಡಗಿಸಲು ಮ್ಯಾನ್ಮಾರ್ ಮಿಲಿಟರಿ ಫೈಟರ್ ಜೆಟ್‍ಗಳ ಮೂಲಕ ತೀವ್ರ ಆರ್ಟಿಲರಿ ದಾಳಿ ನಡೆಸುತ್ತಿದೆ.


ನಾಗರೀಕರ ಸ್ಥಳಾಂತರ


ವಿಶ್ವಸಂಸ್ಥೆಯ ನಿರಾಶ್ರಿತರ ಆಯೋಗದ ಆಯುಕ್ತರ ಕಚೇರಿಯ ಪ್ರಕಾರ ಈವರೆಗೂ ಕಚಿನ್, ಕಾರೆನ್, ಚಿನ್, ಮತ್ತು ಖಾಯಾದಿಂದ 1,75,000 ಜನರನ್ನು ಸ್ಥಳಾಂತರಿಸಲಾಗಿದೆ. ಈ ಸಂಘರ್ಷದಲ್ಲಿ ಸಿಕ್ಕಿ ನರಳಿದ ಸಾವಿರಾರು ನಿರಾಶ್ರಿತರು ಬೇರೆ ಬೇರೆ ದೇಶಗಳಲ್ಲಿ ನಿರಾಶ್ರಿತರಾಗಿದ್ದಾರೆ ಅಲ್ಲದೆ ಇನ್ನು ಅನೇಕ ಸಾವಿರದಷ್ಟು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಇನ್ನು ಅನೇಕರು ಕ್ರೈಸ್ತ ಸಂಸ್ಥೆಗಳು ಮತ್ತು ಚರ್ಚುಗಳು ಹಾಗೂ ಭೌಧ್ಧ ಆಶ್ರಮಗಳಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದಾರೆ. ಸುರಕ್ಷಿತವೆನಿಸಿಕೊಂಡಿದ್ದ ಚರ್ಚುಗಳ ಮೇಲೆಯೂ ಸಹ ಮ್ಯಾನ್ಮಾರ್ ಮಿಲಿಟರಿ ಆಡಳಿತ ದಾಳಿಯನ್ನು ನಡೆಸುತ್ತಿದೆ.


ಮ್ಯಾನ್ಮಾರ್‍ನ ಯಂಗೊನ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಹಾಗೂ ಮ್ಯಾನ್ಮಾರ್ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮಿತಿಯ ಅಧ್ಯಕ್ಷ ಕಾರ್ಡಿನಲ್ ಚಾಲ್ರ್ಸ್ ಬೊ ಅವರು ಸಂಘರ್ಷದಲ್ಲಿರುವ ಉಭಯ ಪಕ್ಷಗಳಿಗೂ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸದಂತೆ ಹಾಗೂ ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಕಾನೂನುಗಳನ್ನು ಪಾಲಿಸುವಂತೆ ಬಿನ್ನವಿಸಿಕೊಂಡಿದ್ದರು. ಅವರ ಈ ಬಿನ್ನಹದ ಹೊರತಾಗಿಯೂ ಭಾನುವಾರ ಶಾಂತಿಮಾತೆಯ ದೇವಾಲಯದ ಮೇಲೆ ದಾಳಿ ನಡೆದಿದೆ.


ಮ್ಯಾನ್ಮಾರ್ ಮಿಲಿಟರಿ ಮಾನವ ಸಂಘಟನೆಗಳ ಮೇಲೆ ಮಾತ್ರ ದಾಳಿಮಾಡಿದೆ ಅಲ್ಲದೆ ಕೆಲವು ವೀಕ್ಷಕರು ಹೇಳುವಂತೆ ಮಿಲಿಟರಿ ಗುಂಪು ಈ ಸಂಘರ್ಷವನ್ನು ಧಾರ್ಮಿಕ ಯುಧ್ಧವನ್ನಾಗಿಸಲು ಪ್ರಯತ್ನಿಸುತ್ತಿದೆ ಎನ್ನುತ್ತಾರೆ.


ಶನಿವಾರ, ಮಿಲಿಟರಿ ಪಡೆಗಳು 20 ನಾಗರೀಕರನ್ನು ಅಯೆಯಾರ್‍ವಾಡಿ ಪ್ರದೇಶದಲ್ಲಿ ಕೊಂದಿದೆ. ಲಾಸ್ವೆ ಗ್ರಾಮದ ಗ್ರಾಮಸ್ಥರು ಆಯುಧಗಳಿಗಾಗಿ ತಮ್ಮ ಕವೆಣೆ ಮತ್ತು ಬಿಲ್ಲುಗಳಿಂದ ಮಿಲಿಟರಿ ಗುಂಪಿಗೆ ದಾಳಿ ನಡೆಸಿದ ಪರಿಣಾಮ 20 ಜನರು ಸತ್ತು, ಇದು ಹಿಂದಿನ ಸಾವುಗಳಿಗಿಂತ ಅತಿ ಹೆಚ್ಚು ಸಾವುಗಳು ಉಂಟಾದ ಘಟನೆಯಾಗಿದೆ.


ಹಠವಾದಿ ಮಿಲಿಟರಿ ಪಡೆ


ದಂಗೆ ವಿರೋಧಿ ಪ್ರತಿಭಟನೆಗಳ ಕುರಿತು ದಾಖಲಿಸುವ ಹಾಗೂ ಸಂಭವಿಸುವ ಸಾವುಗಳ ಕುರಿತು ಮಾಹಿತಿ ಸಂಗ್ರಹಿಸುವ ದಿ ಅಸಿಸ್ಟೆನ್ಸ್ ಅಸೋಸಿಯೇಷನ್ ಫಾರ್ ಪೊಲಿಟಿಕಲ್ ಪ್ರಿಸನರ್ಸ್ ಸಂಸ್ಥೆಯ ಪ್ರಕಾರ ಈವರೆಗೂ 857 ಜನರು ಮಿಲಿಟರಿ ಪಡೆಗಳಿಂದ ಸಾವಿಗೀಡಾಗಿದ್ದಾರೆ ಎಂದು ದೃಢೀಕರಿಸಲಾಗಿದೆ.


ಅಸೋಸಿಯೇಷನ್ ಆಫ್ ಸೌಥ್ ಈಸ್ಟ್ ಏಷಿಯನ್ ನೇಷನ್ಸ್ (ಎಎಸ್‍ಇಎಎನ್) ಏಪ್ರಿಲ್‍ನಲ್ಲಿ ಹಿಂಸೆಯನ್ನು ಕೊನೆಗಾಣಿಸಿ, ರಾಜಕೀಯ ವಿರೋಧಿಗಳೊಂದಿಗೆ ಮಾತುಕತೆಯನ್ನು ಹಮ್ಮಿಕೊಳ್ಳಬೇಕು ಎಂಬ ಮಾತಿಗೆ ಮ್ಯಾನ್ಮಾರ್ ಮಿಲಿಟರಿ ಆಡಳಿತ ಎಳ್ಳಷ್ಟೂ ಗಮನ ನೀಡಿಲ್ಲ. ಅಸೋಸಿಯೇಷನ್ ಆಫ್ ಸೌಥ್ ಈಸ್ಟ್ ಏಷಿಯನ್ ನೇಷನ್ಸ್ (ಎಎಸ್‍ಇಎಎನ್) ನ ವಿದೇಶಾಂಗ ಮಂತ್ರಿಗಳು ಮ್ಯಾನ್ಮಾರ್‍ನಲ್ಲಿ ಹಿಂಸೆಯನ್ನು ಕೊನೆಗಾಣಿಸುವಲ್ಲಿ ಆಗಿರುವ ಕನಿಷ್ಟ ಪ್ರಗತಿಯ ಕುರಿತು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದರು.


ಪೋಪ್ ಫ್ರಾನ್ಸಿಸ್ ಭಾನುವಾರ ಸಕಲ ಧರ್ಮಗಳ ಅನುಯಾಯಿಗಳಿಗೆ ಮಂಗಳವಾರ ಒಂದು ಗಂಟೆಗೆ ತಾವು ಇದ್ದಲ್ಲಿಂದಲೇ ಒಂದು ನಿಮಿಷ ಪವಿತ್ರ ನಾಡಿನಲ್ಲಿ ಹಾಗೂ ಮ್ಯಾನ್ಮಾರ್ ದೇಶದಲ್ಲಿ ಶಾಂತಿ ನೆಲೆಸಲು ಮೌನವಾಗಿ ಪ್ರಾರ್ಥಿಸಬೇಕೆಂದು ಕರೆ ನೀಡಿದ್ದಾರೆ.


ಇಂಟರ್‍ನ್ಯಾಷನಲ್ ಫೋರಂ ಆಫ್ ಕ್ಯಾಥೋಲಿಕ್ ಆಕ್ಷನ್ (ಐಎಫ್‍ಸಿಎ) ನ ಶಾಂತಿಯ ಉಪಕ್ರಮವು ಸ್ಥಳೀಯ ಕಥೋಲಿಕ ಕ್ರಿಯಾ ಸಂಸ್ಥೆಗಳು ಮತ್ತು ವಲ್ರ್ಡ್ ಯೂನಿಯನ್ ಆಫ್ ಕ್ಯಾಥೋಲಿಕ್ ವಿಮೆನ್ ಆರ್ಗನೈಝೇಷನ್ ಮತ್ತು ಇತರೆ ಸಂಸ್ಥೆಗಳ ಬೆಂಬಲವನ್ನು ಹೊಂದಿದೆ.


08 ಜೂನ್ 2021, 13:37


ಕನ್ನಡಕ್ಕೆ: ಅಜಯ್ ರಾಜ್
44 views0 comments