top of page

ವ್ಯಾಟಿಕನ್ ವಿಭಾಗೀಯ ಸಂವಹನ ಕಚೇರಿಗೆ 'ಧರ್ಮಸಭೆಯ ಸಹಾಯಕ' ನನ್ನು ನೇಮಿಸಿದ ಪೋಪ್


ಇಟಲಿಯ ಲ’ಅಕ್ವಿಲ ಮಹಾಧರ್ಮಕ್ಷೇತ್ರದ ಫಾದರ್ ಲುಯಿಜಿ ಮರಿಯ ಎಪಿಕೊಕೊ ಅವರನ್ನು ಪವಿತ್ರ ತಂದೆ ಪೋಪ್ ಫ್ರಾನ್ಸಿಸ್ ವ್ಯಾಟಿಕನ್ ವಿಭಾಗೀಯ ಸಂವಹನ ಕಚೇರಿಗೆ ಧರ್ಮಸಭೆಯ ಸಹಾಯಕನನ್ನಾಗಿ ಹಾಗೂ ‘ಲೊಸೆರ್ವತೋರೆ ರೊಮಾನೋ’ ಪತ್ರಿಕೆಗೆ ಅಂಕಣಕಾರನನ್ನಾಗಿ ನೇಮಿಸಿದ್ದಾರೆ. ವ್ಯಾಟಿಕನ್ ವಾರ್ತೆಗೆ ನೀಡಿದ ಸಂದರ್ಶನದಲ್ಲಿ, ಫಾದರ್ ಲುಯಿಜಿ ಮರಿಯ ಎಪಿಕೊಕೊ “ಸಂವಹನ ಸಹಭಾಗಿತ್ವದ ವಾಹಿನಿ” ಎಂದು ಹೇಳಿದ್ದಾರೆ.


ವರದಿ: ಫೇಬಿಯೊ ಕೊಲಗ್ರಾಂದೆ


2019 ರಲ್ಲಿ ರೋಮನ್ ಕಾರ್ಯಾಲಯಕ್ಕೆ ಕ್ರಿಸ್ಮಸ್ ಶುಭ ಕೋರುವ ಸಂದರ್ಭದಲ್ಲಿ ಪೋಪ್ ಫ್ರಾನಿಸ್ ಅವರು ಕಾರ್ಯಾಲಯದ ಎಲ್ಲಾ ಕಾರ್ಡಿನಲ್‌ಗಳಿಗೆ ಫಾದರ್ ಲುಯಿಜಿ ಮರಿಯ ಎಪಿಕೊಕೊ ಅವರು ಬರೆದ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಫಾದರ್ ಲುಯಿಜಿ ಮರಿಯ ಎಪಿಕೊಕೊ ಅವರ ಸಂಪಾದಕೀಯ ಬದ್ಧತೆ ಮತ್ತು ಸಂವಹನಗಾರರಾಗಿ ಅವರ ಕೌಶಲ್ಯಕ್ಕೆ ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ ವಿಭಾಗೀಯ ಸಂವಹನ ಕಚೇರಿಗೆ ಧರ್ಮಸಭೆಯ ಸಹಾಯಕನನ್ನಾಗಿ ಹಾಗೂ ‘ಲೊಸರ‍್ವಾತೊರೆ ರೊಮಾನೋ’ ಪತ್ರಿಕೆಗೆ ಅಂಕಣಕಾರರಾಗಿ ನೇಮಿಸಿದ್ದಾರೆ,


ಫಾದರ್ ಲುಯಿಜಿ ಮರಿಯ ಎಪಿಕೊಕೊ ಅವರಿಗೆ 2005 ರಲ್ಲಿ ಅಂದಿನ ಲ’ಅಕ್ವಿಲ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ವಂದನೀಯ ಜಿಯುಸೆಪ್ಪೆ ಮೊಲಿನಾರಿ ಅವರು ಯಾಜಕಾಭೀಷೇಕವನ್ನು ನೀಡಿದರು. ಒಬ್ಬ ಯುವಗುರುವಾಗಿ ಇವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಾರ್ಥನಾಲಯದ ಗುರುವಾಗಿ ಸೇವೆ ಸಲ್ಲಿಸುತ್ತಿದ್ದಾಗ ಏಪ್ರಿಲ್ 06, 2009 ರಂದು ಸಂಭವಿಸಿದ ಭೂಕಂಪದಿAದಾಗಿ “ಕಾಸಾ ದೆಲ್ಲೊ ಸ್ತುದೆಂತೆ” ಯ ಮೇಲ್ಛಾವಣಿ ಕುಸಿದು ೮ ಯುವಕರು ಮರಣಹೊಂದಿದರು. ಇಂತಹ ಭಯಾನಕ ನೋವುಗಳಲ್ಲಿ ಫಾದರ್ ಲುಯಿಜಿ ಜೀವಿಸಿದ್ದಾರೆ.


ಮೂಲತಃ ಬ್ರಿಂದಿಸಿಯವರಾದ ಫಾದರ್ ಎಪಿಕೊಕೊ ಅನೇಕ ಧಾರ್ಮಿಕ ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸಕ್ತ ಇವರು ಲ್ಯಾಟರನ್ ವಿಶ್ವವಿದ್ಯಾಲಯದ ತತ್ವಶಾಸ್ತç ಪೀಠದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. 2019 ರಲ್ಲಿ, ರೋಮ್ ಧರ್ಮಪ್ರಾಂತ್ಯದ ಕಾರ್ಡಿನಲ್ ವಿಕಾರ್ ಆದ ಎಂಜೆಲೊ ದೆ ದೊನಾತಿಸ್ ಅವರು ಇವರನ್ನು ಲ’ಅಕ್ವಿಲ ಮಹಾಧರ್ಮಕ್ಷೇತ್ರದ ಧಾರ್ಮಿಕ ಅಧ್ಯಯನದ ಉನ್ನತ ಪೀಠ ಫಿದೆಸ್ ಎತ್ ರೆಷಿಯೊ ಇಸ್ರ್ ನ ಡೀನ್ ಆಗಿ ನೇಮಿಸಿದರು.


ಈ ಸಂದರ್ಶನದಲ್ಲಿ ಫಾದರ್ ಲುಯಿಜಿ “ಸಂವಹನದ ಮೂಲಕ ಸಹಭಾಗಿತ್ವವನ್ನು ಸಾಧ್ಯವಾಗಿಸುವುದರ” ಕುರಿತು ಮಾತನಾಡಿ, ಪತ್ರಕರ್ತನನ್ನು “ಸೇತುವೆ ನಿರ್ಮಿಸುವವನನ್ನಾಗಿ” ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದರ ಅವಶ್ಯಕತೆಯ ಕುರಿತು ಬೆಳಕು ಚೆಲ್ಲಿದ್ದರು.


ವ್ಯಾಟಿಕನ್ ವಾರ್ತೆ: ನಿಮ್ಮ ನೇಮಕಾತಿಯ ಕುರಿತು ನಿಮಗೆ ಏನನಿಸಿತು?


ಫಾದರ್ ಲುಯಿಜಿ: ನನ್ನ ನೆಮಕಾತಿ ಕುರಿತು ತಿಳಿದಾಗ ನನಗೆ ಆಶ್ಚರ್ಯ ಹಾಗೂ ಸಂತೋಷ ಎರಡೂ ಆಯಿತು. ಪೋಪ್ ವಿಶ್ವಗುರುಗಳ ಭೋಧನಾಧಿಕಾರವನ್ನು ಜಗತ್ತಿಗೆ ಸಾರುವುದಲ್ಲದೆ ಸಂವಹನದ ಮೂಲಕ ಸಹಭಾಗಿತ್ವವನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪವಿತ್ರ ಪೀಠದ ವಿಭಾಗೀಯ ಸವಂಹನ ಕಚೇರಿಗೆ ನನ್ನಿಂದ ಸಾಧ್ಯವಾದಷ್ಟೂ ಸೇವೆ ನೀಡಲು ಭರವಸೆ ಹೊಂದಿದ್ದೇನೆ.


ವ್ಯಾಟಿಕನ್ ವಾರ್ತೆ: ಸಂವಹನ ಕಚೇರಿಯಲ್ಲಿ ಧರ್ಮಸಭೆಯ ಸಹಾಯಕ ಹುದ್ದೆಯು ಯಾವ ಪಾತ್ರವನ್ನು ನಿಭಾಯಿಸುತ್ತದೆ?


ಫಾದರ್ ಲುಯಿಜಿ: ಒಂದು ಫುಟ್ಬಾಲ್ ಆಟದಲ್ಲಿ ಆಟಗಾರರು ಆಡುವಾಗ ಅವರಿಗೇನಾದರೂ ತೊಂದರೆ ಆದರೆ ಚಿಕಿತ್ಸೆಗಿರುವ ಫಿಸಿಯೋಥೆರಪಿಸ್ಟ್, ವೈದ್ಯರ ಜೊತೆಗೆ ತರಬೇತುದಾರರೂ ಇರುತ್ತಾರೆ. ಇವರೆಲ್ಲ ಸಕ್ರಿಯವಾಗಿ ತಂಡದಲ್ಲಿ ಆಟ ಆಡದಿದ್ದರೂ ಆಟಗಾರರಿಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತಾರೆ. ವ್ಯಾಟಿಕನ್ ವಿಭಾಗೀಯ ಸಂವಹನ ಕಚೇರಿಯಲ್ಲಿ ಸಂವಹನ ಕಚೇರಿಗೆ ಮಾತ್ರವಲ್ಲದೆ ಅಖಿಲ ಧರ್ಮಸಭೆಗೆ ತಮ್ಮ ಹೃದಯಾಂತರಾಳದಿಂದ ಸೇವೆ ಸಲ್ಲಿಸಲು ಕಟಿಬದ್ಧರಾಗಿರುವವರು ಬಹಳಷ್ಟು ಮಂದಿ ಇದ್ದಾರೆ. ಅವರೆಲ್ಲರ ಪರಿಶ್ರಮ ಮತ್ತು ಸಾಮರ್ಥ್ಯಕ್ಕೆ ಒತ್ತಾಸೆಯಾಗಲು ಪೋಪ್ ನನ್ನನ್ನು ನೇಮಿಸಿದ್ದಾರೆ.


ವ್ಯಾಟಿಕನ್ ವಾರ್ತೆ: ಪವಿತ್ರ ಪೀಠದ ದಿನಪತ್ರಿಕೆಗೂ ಸಹ ನಿಮ್ಮನ್ನು ಅಂಕಣಕಾರರನ್ನಾಗಿ ನೇಮಿಸಲಾಗಿದೆ. ಅದಲ್ಲದೆ ನೀವು ಕಥೋಲಿಕ ಪ್ರಕಟಣೆಯ ಗೌರವಾನ್ವಿತ ಲೇಖಕರಾಗಿದ್ದೀರಿ. ಇಂದಿನ ಕಾಲದಲ್ಲಿ ಕಥೋಲಿಕ ಸಂವಹನಗಾರರಿಗಿರುವ ಸವಾಲುಗಳಾವುವು?


ಫಾದರ್ ಲೂಯಿಜಿ: ಮೊದಲನೆಯದಾಗಿ, ಸೈದ್ಧಾಂತಿಕ ರೀತಿಯಲ್ಲಿ ಮಾಡದೆ, ನಿರಂತರವಾಗಿ ಸತ್ಯವನ್ನು ಹುಡುಕುವುದು ಸವಾಲು ಎಂದು ನಾನು ನಂಬುತ್ತೇನೆ. ಕೆಲವೊಮ್ಮೆ ಸುದ್ದಿಯ ಗೆರೆಗಳಲ್ಲಿ ಹಾಗೂ ಸಾಂಸ್ಕೃತಿಕ ಚಳುವಳಿಗಳಲ್ಲಿ ಮರೆಯಾಗಿರುವ ಸತ್ಯದ 'ಸಾಮಾನ್ಯ ಎಳೆ' ಗಾಗಿ ನಾವು ಹುಡುಕಬೇಕಿದೆ. ಒಬ್ಬ ಒಳ್ಳೆಯ ಪತ್ರಕರ್ತ ಹಾಗೂ ಒಳ್ಳೆಯ ಬರಹಗಾರನಾದವನು ಈ ಸತ್ಯದ ಎಳೆಯನ್ನು ಹೊರತರುವಲ್ಲಿ ಯಶಸ್ವಿಯಾಗಬೇಕು. ಇದರಲ್ಲಿ ಯಶಸ್ವಿಯಾದಾಗ ಖಂಡಿತವಾಗಿಯೂ ಅವನು ದೂರದಲ್ಲಿರುವ, ವಿಭಿನ್ನವಾದ ಸಂಗತಿಗಳೊಂದಿಗೆ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುತ್ತಾನೆ. ಕಥೋಲಿಕ ಸಂವಹನಗಾರನನ್ನು ನಾನು ಒಬ್ಬ "ಸಂಭಾಷಣೆಯನ್ನು ಕಟ್ಟುವವನು" ಎಂಬುದಾಗಿ ನೋಡುತ್ತೇನೆಯೇ ವಿನಃ ಕೆಟ್ಟದನ್ನು ಮಾಡಲು ಪೆನ್ನು ಹಾಗೂ ತನ್ನ ವೃತ್ತಿಯನ್ನು ಬಳಸಿಕೊಳ್ಳುವ ಉಗ್ರಗಾಮಿಯಂತಲ್ಲ.


ವ್ಯಾಟಿಕನ್ ವಾರ್ತೆ: ವಿಶ್ವ ಸಂವಹನ ದಿನಾಚರಣೆಯ ತನ್ನ ಇತ್ತೀಚಿನ ಸಂದೇಶದಲ್ಲಿ, ಪೋಪ್ ಫ್ರಾನ್ಸಿಸ್ ಪತ್ರಿಕೋದ್ಯಮದಲ್ಲಿ ತನ್ನನ್ನು ತಾನೇ ನೋಡುವುದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಒತ್ತಿಹೇಳುತ್ತಾರೆ. ಈ ವೃತ್ತಿಯಲ್ಲೂ ಸಂಬಂಧ ಮುಖ್ಯವೇ?


ಫಾದರ್ ಲೂಯಿಜಿ: ಈ ವೃತ್ತಿಯಲ್ಲಿ ನಾನು ವಾಸ್ತವದೊಂದಿಗೆ ಸಂಬಂಧವನ್ನು ಹೊಂದಿರುವುದು ಮುಖ್ಯ ಎಂದು ನಂಬುತ್ತೇನೆ ಹೊರತು ವಾಸ್ತವದ ಅನುಭವಗಳನ್ನು ಬದಲಾಯಿಸುವ ಪೂರ್ವಾಗ್ರಹಗಳೊಂದಿಗೆ ಅಲ್ಲ. ಇದು ಪೋಪ್ ಫ್ರಾನ್ಸಿಸ್ ಅವರು "ಸಾಕ್ಷಿ ನೀಡುವ" ಶ್ರೇಷ್ಠ ವರ್ಗವನ್ನು ಮತ್ತೆ ಕೇಂದ್ರದಲ್ಲಿ ಇರಿಸಿದ್ದಾರೆ ಎಂದು ಹೇಳುವಂತಿದೆ. ಒಬ್ಬ ನೈಜ ಪತ್ರಕರ್ತನಾಗಬೇಕೆಂದರೆ ಪತ್ರಕರ್ತನಾದವನು ಮೊದಲು ಸಾಕ್ಷಿಯಾಗಬೇಕು.


ವ್ಯಾಟಿಕನ್ ವಾರ್ತೆ: ನಿಮ್ಮ ಪುಸ್ತಕಗಳಲ್ಲಿ ವಿಶ್ವಾಸಿಗಳಿಗೆ ಅವರು ತಮ್ಮದೇ ಆದ ದೌರ್ಬಲ್ಯಗಳನ್ನು ಗುರುತಿಸಿ ದೇವರಿಗೆ ಒಪ್ಪಿಸುವ ಅಗತ್ಯವನ್ನು ನೀವು ಆಗಾಗ್ಗೆ ಒತ್ತಿ ಹೇಳುತ್ತೀರಿ. ನಿಮ್ಮ ಹೊಸ ನಿಯೋಜನೆಗೆ ಇದು ಒಂದು ಆರಂಭಿಕ ಹಂತವಾಗಿರಬಹುದೇ?


ಫಾದರ್ ಲೂಯಿಜಿ: ಖಂಡಿತವಾಗಿಯೂ ಹೌದು. ಶುಭಸಂದೇಶದಲ್ಲಿ ಕ್ರಿಸ್ತರು ಒಬ್ಬ ಹುಡುಗನಿಂದ ಪಡೆದ ಐದು ರೊಟ್ಟಿ ಎರಡು ಮೀನುಗಳನ್ನು ಐದು ಸಾವಿರ ಜನರಿಗೆ ಹಂಚುತ್ತಾರೆ. ಇದು ನನ್ನ ಉದ್ದೇಶ ಮಾತ್ರವಲ್ಲ, ಬದಲಿಗೆ ನನ್ನ ಅನುಭವದ ಬೆನ್ನಹೊರೆಯ ಮೇಲೆ ಹೊತ್ತೊಯ್ಯುವ ಕೊಂಚ ಮಟ್ಟಿಗಿನ ನನ್ನ ಸೇವೆಯು, ಈ ವಿಭಾಗೀಯ ಕಚೇರಿಗೆ, ಅದರಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಮತ್ತು ಇತರರಿಗೆ ಸಹಾಯಕವಾಗುತ್ತದೆ ಎಂಬ ಭರವಸೆಯನ್ನು ಹೊಂದಿದ್ದೇನೆ.


17 ಜೂನ್ 2021, 11:24


ಕನ್ನಡಕ್ಕೆ: ಅಜಯ್ ರಾಜ್

32 views0 comments

Comments


bottom of page