top of page

ಕೋವಿಡ್-೧೯ರ ಬಿಕ್ಕಟ್ಟಿನಲ್ಲಿ ಬಳಲುತ್ತಿರುವವರ ಸಹಾಯಕ್ಕೆ ವಿಯೆಟ್ನಾಂ ಧರ್ಮಸಭೆ


ವಿಯೆಟ್ನಾಂನಲ್ಲಿ ಪರಿಸ್ಥಿತಿ ಹದಗೆಡುತ್ತಿರುವಾಗ ಅಲ್ಲಿನ ಕಥೋಲಿಕ ಸಮುದಾಯದವರು ಕೋವಿಡ್-೧೯ರ ಪೀಡಿತರಿಗೆ ನೆರವಿನ ಕಾರ್ಯವನ್ನು ಮುಂದುವರೆಸಿದ್ದಾರೆ.


ವ್ಯಾಟಿಕನ್ ಸಿಬ್ಬಂದಿ ವಾರ್ತಾ ಬರಗಾಹರರಿಂದ


ಪ್ರಪಂಚದ ಅನೇಕ ದೇಶಗಳು ಕೋವಿಡ್-೧೯ರ ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿದ ಮೇಲೆ ವಿಯೆಟ್ನಾಂನಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಕಳೆದ ಸೋಮವಾರ ೧೩,೪೮೩ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೧೭೧೪ ಪ್ರಕರಣಗಳು ಹೋ ಚಿ ಮಿನ್‌ಹ್ ನಗರದಲ್ಲಿ ದಾಖಲಾಗಿದೆ. ಸ್ಥಳೀಯ ಧರ್ಮಪ್ರಾಂತ್ಯದ ಕಥೋಲಿಕ ಸಮುದಾಯದವರು ತಮ್ಮ ಸಹಕಾರ ನೀಡಲು ಮುಂದಾಗಿದ್ದಾರೆ.


ಟಾನ್ ಟಾಂಗ್ ಧರ್ಮಕೇಂದ್ರ


ಟಾನ್ ಟಾಂಗ್ ಧರ್ಮಕೇಂದ್ರದ ಧರ್ಮಗುರು ಫಾದರ್ ಜೋಸೆಫ್ ಐನ್ ವಾನ್ ಥಾ ರವರು ಪ್ರಾರ್ಥನೆಯೊಂದಿಗೆ ದಾನಕಾರ್ಯಗಳನ್ನು ಕೈಗೊಳ್ಳುವಂತೆ ಶ್ರದ್ಧಾಳುಗಳಿಗೆ ಕರೆ ನೀಡಿದ್ದಾರೆ. ಹೆಚ್ಚು ಅಗತ್ಯ ಇರುವವರಿಗೆ ಧರ್ಮಕೇಂದ್ರವು ಆಹಾರ ವಿತರಣೆಯನ್ನು ಆಯೋಜಿಸಿದೆ. ಇದರಲ್ಲಿ ಕಸ ಸಂಗ್ರಹಕಾರರು, ವೃದ್ಧರು, ಅನಾರೋಗ್ಯ ಪೀಡಿತರು ಮತ್ತು ಬಡತನದ ಪ್ರದೇಶದಲ್ಲಿ ವಾಸಿಸುವವರು ಒಳಗೊಂಡಿದ್ದಾರೆ. “ಅನೇಕ ಕುಟುಂಬಗಳು ಬೃಹತ್ ಸವಾಲುಗಳನ್ನು ಎದುರಿಸುತ್ತಿವೆ. ಆದರೂ ದೇವರಲ್ಲಿ ಸದಾ ನಂಬಿಕೆ ಹೊಂದಿದ್ದೇವೆ. ಸಾಂಕ್ರಾಮಿಕ ರೋಗದ ಅಂತ್ಯಕ್ಕಾಗಿ ಹಾಗು ಎಲ್ಲರಲ್ಲಿ ಶಾಂತಿ ನೆಲೆಸುವುದಕ್ಕಾಗಿ ಪ್ರಾರ್ಥಿಸುತ್ತೇವೆ. ಪ್ರೀತಿ ಔದಾರ್ಯತೆಯಿಂದ ದಾನ ಮತ್ತು ಸಹಕಾರ ನೀಡಿದವರಿಗೆ ಧನ್ಯವಾದಗಳು” ಎಂದು ಫಾದರ್ ಜೋಸೆಫ್ ತಿಳಿಸಿದ್ದಾರೆ.


ಸಂತ ಮಾರ್ಟಿನ್ಸ್ ಧರ್ಮಕೇಂದ್ರ


ಸಂತ ಮಾರ್ಟಿನ್ಸ್ ಧರ್ಮಕೇಂದ್ರದ ಧರ್ಮಗುರು ಫಾದರ್ ಪೀಟರ್ ವಿ ಮಿನ್‌ಹ್ ಹಾಂಗ್ ರವರು ಅದಾಗಲೇ ೨೦೧೬ರಲ್ಲಿ ಕ್ವಾನ್ ಕಾಮ್ ೨೦೦೦ನ್ನು ತೆರೆದಿದ್ದು ಕ್ಯಾಂಟೀನ್‌ನಲ್ಲಿ ಬಡವರು ೨೦೦೦ ಡಾಂಗ್‌ಗೆ (ಯುಎಸ್ ಸೆಂಟ್ಸ್ ದರಕ್ಕೆ ಸಮಾನ) ಒಂದು ಪ್ಲೇಟ್ ಊಟವನ್ನು ಪಡೆಯಬಹುದಿತ್ತು. ಆದರೆ, ಸಾಂಕ್ರಾಮಿಕ ರೋಗದಿಂದ ಕ್ಯಾಂಟಿನ್ ಮುಚ್ಚಲು ಒತ್ತಡ ಹೇರಲಾಯಿತು. ಆದರೆ ಆ ಸ್ಥಳವನ್ನು ಲಾಟರಿ ಟಿಕೆಟ್‌ಗಳನ್ನು ಮಾರುವವರು, ಮೋಟಾರ್ ಸೈಕಲ್ ಟ್ಯಾಕ್ಸಿಗಳನ್ನು ಓಡಿಸುವವರು, ಬಡವರು ಹಾಗು ನಿರ್ಗತಿಕರಿಗೆ ಧಾನ್ಯ ವಿತರಣೆಗೆ ಪುನರ್‌ ಸಂಘಟಿಸಲಾಗಿದೆ. ಪ್ರತಿ ದಿನ ೫೦೦ ರಿಂದ ೬೦೦ ಮಂದಿ ಆಗಮಿಸುತ್ತಿದ್ದು, ಫಾದರ್ ಪೀಟರ್ ವಿ ಮಿನ್‌ಹ್ ಹಾಂಗ್‌ರವರೇ ಸ್ವತಃ ಆಹಾರ ತಯಾರಿಕೆಯಲ್ಲಿ ತೊಡಗಿದ್ದಾರೆ.


ಕ್ಸುವಾನ್ ಹೈಪ್ ಧರ್ಮಕೇಂದ್ರ


ಕ್ಸುವಾನ್ ಹೈಪ್ ಧರ್ಮಕೇಂದ್ರದ ಧರ್ಮಗುರು ಸಲೇಷಿಯನ್ ಫಾದರ್ ನ್ಗುಯೆನ್ ಟ್ರುವೋಂಗ್ ಥಾಚ್ ರವರು ಆಹಾರ ಪಾರ್ಸಲ್‌ಗಳ ವಿತರಣೆಯನ್ನು ಆಯೋಜಿಸಿದ್ದಾರೆ. ಇದಕ್ಕೆ ವಿಯೆಟ್ನಾಂ ಜೆಸ್ವಿಟ್ ಪ್ರಾಂತ್ಯದ ದಾನ ಮತ್ತು ಸಾಮಾಜಿಕ ಕಾರ್ಯಗಳ ಇಲಾಖೆ ಸಹಕರಿಸುತ್ತಿದೆ. ನೀರು ಮತ್ತು ವಿದ್ಯುತ್ ಬಿಲ್‌ಗಳನ್ನು ಪಾವತಿಸಲು, ಔಷಧಿಗಳನ್ನು ಕೊಳ್ಳಲು ಹೆಣಗಾಡುತ್ತಿರುವವರಿಗೆ ಸಹಾಯ ಮಾಡಲು ಧರ್ಮಕೇಂದ್ರವು ಸಣ್ಣ ಮೊತ್ತದ ನಿಧಿಯನ್ನು ಮೀಸಲಿಟ್ಟಿದೆ.


ಹೋಂಗ್ ಮಾಯ್ ಧರ್ಮಕೇಂದ್ರ


ಕೋವಿಡ್‌ನಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಹೋಂಗ್ ಮಾಯ್‌ನ ಧರ್ಮಕೇಂದ್ರವು ಇತ್ತೀಚಿನ ದಿನಗಳಲ್ಲಿ ಸಂಪರ್ಕ ತಡೆಯನ್ನು ಎದುರಿಸಬೇಕಾಯಿತು. ಆದರೆ ಕಷ್ಟಗಳ ನಡುವೆಯೂ ಕುಟುಂಬಗಳು ಆಹಾರ ಹಂಚಿಕೊಳ್ಳುವುದನ್ನು, ಮಾಸ್ಕ್ಗಳನ್ನು ವಿತರಿಸುವುದನ್ನು ನಿಲ್ಲಿಸಲಿಲ್ಲ.


ವಿಯೆಟ್ನಾಂನಲ್ಲಿ ಕಥೋಲಿಕ ಧರ್ಮಸಭೆ ಫಿಲಿಪೈನ್ಸ್, ಭಾರತ, ಚೀನಾ ಮತ್ತು ಇಂಡೋನೇಷಿಯಾದ ನಂತರ ವಿಯೆಟ್ನಾಂ ಏಷ್ಯಾದಲ್ಲಿ ಐದನೇ ಅತಿ ದೊಡ್ಡ ಕಥೋಲಿಕ ಜನಸಂಖ್ಯೆಯನ್ನು ಹೊಂದಿದೆ. ವಿಯೆಟ್ನಾಂನಲ್ಲಿ ಸುಮಾರು ೭೦ ಲಕ್ಷ ಕಥೋಲಿಕರಿದ್ದಾರೆ. ಇದು ಒಟ್ಟು ಶೇ.೭% ರಷ್ಟನ್ನು ಪ್ರತಿನಿಧಿಸುತ್ತದೆ. ಧರ್ಮಸಭೆಯು ೨೭ ಧರ್ಮಪ್ರಾಂತ್ಯಗಳೊಂದಿಗೆ (ಮೂರು ಮಹಾ ಧರ್ಮಕ್ಷೇತ್ರವನ್ನು ಒಳಗೊಂಡಂತೆ) ೨೨೦೦ಕ್ಕೂ ಹೆಚ್ಚು ಧರ್ಮಕೇಂದ್ರಗಳನ್ನು ಹಾಗು ೨೫೦೦ಕ್ಕೂ ಹೆಚ್ಚು ಧರ್ಮಗುರುಗಳನ್ನು ಒಳಗೊಂಡಿದೆ. ೨೦೧೯ರಲ್ಲಿ ಜರುಗಿದ ಜನಗಣಿತಿಯಿಂದ ಮೊದಲ ಬಾರಿಗೆ ಕಥೋಲಿಕ ಧರ್ಮವು ಬೌದ್ಧ ಧರ್ಮವನ್ನು ಮೀರಿದ ಅತಿ ದೊಡ್ಡ ಧಾರ್ಮಿಕ ಪಂಗಡವಾಗಿದೆ ಎಂದು ತಿಳಿದು ಬರುತ್ತದೆ.


ಕನ್ನಡಕ್ಕೆ: ಎಲ್. ಚಿನ್ನಪ್ಪ


23 ಜೂನ್ 2021, 09:52

22 views0 comments
bottom of page