top of page

ಜಾನ್ ಕೆರ್ರಿ: ಹವಾಮಾನ ಬಿಕ್ಕಟ್ಟಿನ ವಿಷಯದಲ್ಲಿ ಪೋಪ್ ಫ್ರಾನ್ಸಿಸ್‍ರವರ ಧ್ವನಿ ಅತ್ಯಂತ ಮಹತ್ವದ ಧ್ವನಿಗಳಲ್ಲೊಂದು!


“ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಮಾಡಿದ ನಂತರ ಹವಾಮಾನ ಕುರಿತ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್ ಕೆರ್ರಿ ಅವರು ಪೋಪ್ ಫ್ರಾನ್ಸಿಸ್ ಭೇಟಿ ಹಾಗೂ ಜಾಗತಿಕ ಹವಾಮಾನ ಬದಲಾವಣೆಯ ಕುರಿತ ಅವರ ಕಾರ್ಯಗಳ ಬಗ್ಗೆ ವ್ಯಾಟಿಕನ್ ನ್ಯೂಸ್‍ಗಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.”


ಯೂರೋಪ್ ಖಂಡದ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್ ಕೆರ್ರಿ ಶನಿವಾರ ವ್ಯಾಟಿಕನ್ ನಗರಕ್ಕೆ ಭೇಟಿ ನೀಡಿ, ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರೊಡನೆ ಖಾಸಗಿಯಾಗಿ ಸಮಾಲೋಚನೆ ನಡೆಸಿದರು. ಬರ್ಲಿನ್, ರೋಮ್, ಮತ್ತು ಲಂಡನ್ ದೇಶಗಳಿಗೆ ಈಗಾಗಲೇ ಭೇಟಿ ನೀಡಿರುವ ಜಾನ್ ಕೆರ್ರಿ ಇನ್ನೂ ಹಲವು ದೇಶಗಳಿಗೆ ಭೇಟಿ ನೀಡಿ ಆಯಾ ದೇಶಗಳ ನಾಯಕರೊಡನೆ ಹವಾಮಾನ ಬದಲಾವಣೆ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಇರುವ ಹಲವು ಭಿಕ್ಕಟ್ಟುಗಳ ಕುರಿತು ಮಾತನಾಡಿ, ಸಹಕಾರ ಕೋರಲಿದ್ದಾರೆ. ಹವಾಮಾನ ಬದಲಾವಣೆಯ ಕುರಿತು ಚರ್ಚಿಸಲಿರುವ ವಿಶ್ವಸಂಸ್ಥೆ ರೂಪಿಸಿರುವ 26ನೇ ಪಕ್ಷಗಳ ಸಮಾವೇಶವು (26th Conference of the Parties) ಈ ವರ್ಷದ ಕೊನೆಯಲ್ಲಿ ನಡೆಯಲಿದೆ.


ಪೋಪ್ ಫ್ರಾನ್ಸಿಸ್ ಹಾಗೂ ಇತರೆ ವ್ಯಾಟಿಕನ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ ವ್ಯಾಟಿಕನ್ ನ್ಯೂಸ್‍ನ ಕ್ರಿಸ್ಟೋಫರ್ ವೆಲ್ಸ್ ಅವರಿಗೆ ಈ ಸಂದರ್ಶನವನ್ನು ನೀಡಿದ್ದಾರೆ.


ತಾವು ಹಲವು ಪ್ರಮುಖ ಕಾರಣಗಳೊಂದಿಗೆ ಯೂರೋಪ್ ಪ್ರವಾಸವನ್ನು ಮಾಡುತ್ತಿದ್ದು, ಜಾಗತಿಕ ನಾಯಕರನ್ನು, ವಿಶೇಷವಾಗಿ ಯೂರೋಪ್ ಖಂಡದ ದೇಶಗಳ ನಾಯಕರನ್ನು ಭೇಟಿಮಾಡಿ ಹವಾಮಾನ ಭಿಕ್ಕಟ್ಟಿನ ಕುರಿತು ಸಮಾಲೋಚಿಸಲಿದ್ದೀರಿ. ಈ ನಿಮ್ಮ ಪ್ರವಾಸದಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಮಾಡುವುದು ಹೇಗೆ ನಿಮಗೆ ಪ್ರಮುಖವೆನಿಸಿತು?


ಹೌದು, ಈ ಭೇಟಿ ಪ್ರಮುಖವಾದದ್ದು. ಏಕೆಂದರೆ, ಪೋಪ್ ಫ್ರಾನ್ಸಿಸ್ ಸಮಂಜಸ ದನಿಯಾಗಿದ್ದು, ಹವಾಮಾನ ಬದಲಾವಣೆ ವಿಷಯದ ಕುರಿತು ಮಾತನಾಡಲು ನೈತಿಕ ಅಧಿಕಾರವನ್ನು ಹೊಂದಿದ್ದಾರೆ. ಈ ವಿಷಯದ ತಿರುವಿನಿಂದ ಅವರು ಈಗಾಗಲೇ ಬಹಳ ದೂರ ಸಾಗಿದ್ದಾರೆ. ಅವರು ಈ ವಿಷಯದಲ್ಲಿ ನಾಯಕತ್ವವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಅವರ ಪ್ರೇಷಿತ ಪರಿಪತ್ರ “ಲೌದಾತೋ ಸೀ” ಒಂದು ಅತ್ಯಂತ ಪ್ರಮುಖ ಹಾಗೂ ಶಕ್ತಿಯುತ ದಾಖಲೆಯಾಗಿದ್ದು ಬಹಳ ಸ್ಪಷ್ಟವಾಗಿದೆ ಮತ್ತು ಓದುಗರ ಮನವೊಲಿಸುವಂತದ್ದಾಗಿದೆ. ಹವಾಮಾನ ಬದಲಾವಣೆ ಕುರಿತ ಅವರ ದನಿ ಬಹಳ ಪ್ರಮುಖವಾಗಿದ್ದು, ಅದು ಗ್ಲಾಸ್ಗೋ ಸಮಾವೇಶಕ್ಕೆ ಒಂದಷ್ಟು ಮಾರ್ಗದರ್ಶನವನ್ನು ನೀಡುತ್ತದೆ ಹಾಗೂ ಪೋಪ್ ಫ್ರಾನ್ಸಿಸ್ ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನನಗನಿಸುತ್ತದೆ. ಆದ್ದರಿಂದ, ಈ ಹೋರಾಟದಲ್ಲಿ ನಮಗೆ ಎಲ್ಲರೂ ಬೇಕು. ವಿಶ್ವದ ಎಲ್ಲಾ ನಾಯಕರೂ ಈ ವಿಷಯದ ಕುರಿತು ಒಟ್ಟಾಗಿ, ಪ್ರತಿ ದೇಶವೂ ಸಹ ಈ ಕುರಿತು ತಮಗಾದುದನ್ನು ಮಾಡಬೇಕು. ಪೋಪ್ ಫ್ರಾನ್ಸಿಸ್ ಈ ಕುರಿತು ತಮ್ಮದೇ ಆದ ವಿಶೇಷ ನೈತಿಕ ಅಧಿಕಾರದಿಂದ ಮಾತಾಡುತ್ತಾರೆ ಎಂದು ನಾನು ಅಭಿಪ್ರಾಯಪಡುತ್ತೇನೆ. ಹವಮಾನ ಬದಲಾವಣೆ ಮತ್ತು ಭಿಕ್ಕಟ್ಟು ಸಮಸ್ಯೆಯನ್ನು ಎದುರಿಸಲು ನಮ್ಮಲ್ಲಿರುವ ಎಲ್ಲಾ ಶಕ್ತಿಯನ್ನು ನಾವು ಒಗ್ಗೂಡಿಸಿ, ಹೋರಾಡಬೇಕಿದೆ.


ಹೌದು, ನಿಮ್ಮ ಮಾತಿನ ಪ್ರಕಾರವೇ ಹೇಳುವುದಾದರೆ, ಪೋಪ್ ಫ್ರಾನ್ಸಿಸ್ ಎಲ್ಲರನ್ನೂ ಒಂದೇ ಸೂರಿನಡಿ ಒಗ್ಗೂಡಿಸಿ, ನಿಶ್ಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕುರಿತು ಒಮ್ಮತಕ್ಕೆ ಬರುವುದು ಎಷ್ಟು ಪ್ರಮುಖವಾಗಿದೆ ಎಂಬುದರ ಕುರಿತೂ ಸಹ ಮಾತನಾಡಿದ್ದಾರೆ. ಅದೇ ಸಮಯದಲ್ಲಿ, ಈ ಕಾರ್ಯದಲ್ಲಿ ವಿವಿಧ ಆಸಕ್ತಿಗಳೂ ಸೇರಿಕೊಂಡಿವೆ. ಇಲ್ಲಿ ದೊಡ್ಡ ದೇಶಗಳೂ ಇವೆ, ಚಿಕ್ಕ ದೇಶಗಳೂ ಇವೆ. ಇನ್ನು ಅಮೆರಿಕ ಸಂಯುಕ್ತ ಸಂಸ್ಥಾನದಂತಹ ಆರ್ಥಿಕವಾಗಿ ಬಲಿಷ್ಠವಾಗಿರುವ ರಾಷ್ಟ್ರದ ಜೊತೆಗೆ ಈಗಷ್ಟೇ ಅಭಿವೃಧ್ಧಿಯನ್ನು ಹೊಂದುತ್ತಿರುವ ರಾಷ್ಟ್ರಗಳೂ ಸಹ ಇದ್ದು, ಅವು ತಮ್ಮದೇ ಆದ ಆಸಕ್ತಿಯ ಲೆಕ್ಕಾಚಾರಗಳನ್ನು ಹೊಂದಿವೆ. ಪರಿಸ್ಥಿತಿ ಹೀಗಿರುವಾಗ, ಪ್ರಾಯೋಗಿಕವಾಗಿ ಈ ಎಲ್ಲಾ ದೇಶಗಳ ನಡುವೆ ನೀವು ಹೇಗೆ ಸಂವಾದಿಸುವಿರಿ? ಇತರೆ ದೇಶಗಳಿಗೆ ಕೊಡುವುದು ಹಾಗೂ ಕೊಳ್ಳುವುದರ ವಿಷಯದಲ್ಲಿ ಅಮೆರಿಕ ಯಾವ ರೀತಿಯಲ್ಲಿ ಸಿದ್ದಗೊಂಡಿದೆ?


ನೀವು ಸರಿಯಾಗಿಯೇ ಹೇಳಿದ್ದೀರಿ. ದೇಶಗಳ ನಡುವೆ ಭಿನ್ನತೆಗಳಿವೆ. ಅವು ಏನು ಮಾಡಬಲ್ಲವು ಹಾಗೂ ಏನು ಮಾಡುತ್ತಿವೆ ಎಂಬುದರ ನಡುವೆಯೂ ಸಹ ಸಾಕಷ್ಟು ವ್ಯತ್ಯಾಸಗಳಿವೆ. ಇದು ಸಮಸ್ಯೆಯ ಭಾಗ ಹಾಗೂ ಪರಿಹಾರದ ಭಾಗದ ನಡುವಿನ ಎರಡು ವೈರುಧ್ಯಗಳು. ಹೌದು, ವ್ಯತ್ಯಾಸಗಳಿವೆ. ಆದರೆ ಈ ವ್ಯತ್ಯಾಸ ಮತ್ತು ಭಿನ್ನತೆಗಳೆಲ್ಲವನ್ನು “ಪ್ಯಾರಿಸ್ ಒಪ್ಪಂದ” ದೊಂದಿಗೆ ಸರಿಪಡಿಸಲಾಗಿದೆ. ಅದಕ್ಕೂ ಮುನ್ನ “ಸಾಮಾನ್ಯ, ಆದರೆ ವಿಭಿನ್ನ ಜವಾಬ್ದಾರಿ” ಎಂಬ ಘೋಷಣೆಯಡಿಯಲ್ಲಿ ಎಲ್ಲಾ ದೇಶಗಳನ್ನು ಒಗ್ಗೂಡಿಸಲಾಗಿದೆ. ನಮಗೆಲ್ಲರಿಗೂ ಜವಾಬ್ದಾರಿಗಳಿವೆ. ಯಾವ ದೇಶವೂ ಸಹ ಹವಾಮಾನ ಬದಲಾವಣೆ ಕುರಿತು ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಹೊರತಾಗಿಲ್ಲ. ಇದೇ ಸಮಯದಲ್ಲಿ ನಾವು ಒಂದು ಪುಟ್ಟ ದೇಶ, ಪುಟ್ಟ ಆರ್ಥಿಕತೆ ಅಥವಾ ಗ್ರೀನ್ ಹೌಸ್ ಗ್ಯಾಸ್ ಅನ್ನು ಹೊರಸೂಸುವವರನ್ನು ನಾವು ಮಾಡುತ್ತಿರುವುದನ್ನೇ ಮಾಡಬೇಕೆಂದು ಒತ್ತಾಯಪಡಿಸುವುದಿಲ್ಲ. ಹೌದು, ನಾವು ಒಪ್ಪಿಕೊಳ್ಳುತ್ತೇವೆ. ಹಾನಿಕಾರಕ ಗ್ಯಾಸ್ ಅನ್ನು ಪರಿಸರಕ್ಕೆ ಹೊರಸೂಸುವುದರಲ್ಲಿ ಜಾಗತಿಕವಾಗಿ ನಾವು ದ್ವಿತೀಯ ಸ್ಥಾನವನ್ನು ಪಡೆದಿದ್ದೇವೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಚೀನಾ ಮೊದಲ ಸ್ಥಾನದಲ್ಲಿದ್ದರೆ ನಮ್ಮ ಹಿಂದೆ ಭಾರತವಿದೆ. ಅದರ ನಂತರ ರಷ್ಯಾ ಹಾಗೂ ಇತರೆ ದೇಶಗಳು. ಆದರೆ, ಈ ಸಮಸ್ಯೆಯನ್ನು ಯಾವುದೇ ಒಂದು ದೇಶ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೆಜ್ಜೆಗಳನ್ನಿಟ್ಟು ಯಾವುದು ಸಮಂಜಸವಾಗಿದೆಯೋ ಅದನ್ನು ಮಾಡಬೇಕು. ಹವಾಮಾನ ಬದಲಾವಣೆ ಕುರಿತ ಸ್ಥಿತಿಸ್ಥಾಪಕತ್ವಕ್ಕೆ ಅಮೆರಿಕವು ತನ್ನ ಪಾಲಿನ ಮೊತ್ತವನ್ನು ವ್ಯಯಿಸಬೇಕು. ಅನಿಲ ಹೊರಸೂಸುವಿಕೆ ತೀವ್ರವಾಗುವುದನ್ನು ತಪ್ಪಿಸಲು ನಾವೆಲ್ಲರೂ ಪ್ರಯತ್ನಿಸಬೇಕು. ಮುಂದಿನ ದಶಕದೊಳಗೆ ಅನಿಲ ಹೊರಸೂಸುವಿಕೆ ನಿಯಂತ್ರಣವನ್ನು ಶೇಕಡ 50 ರಿಂದ 52 ರಷ್ಟು ಹೆಚ್ಚಿಸಬೇಕೆಂದು ಅಮೇರಿಕ ಅಧ್ಯಕ್ಷ ಜೋ ಬೈಡೆನ್ ಯೋಜನೆ ಹಾಕಿಕೊಂಡಿದ್ದಾರೆ. ಇದೇ ಸಮಯದಲ್ಲಿ ಅತಿಯಾಗಿ ಅನಿಲ ಹೊರಸೂಸುತ್ತಿರುವ ದೇಶಗಳೂ ಸಹ ಮುಂದೆ ಬಂದು ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಕಲ್ಲಿದ್ದಲು ಶಕ್ತಿಯನ್ನು ಅಪಾರ ಪ್ರಮಾಣದಲ್ಲಿ ಬಳಸುತ್ತಾ, ಅದನ್ನು ಹೆಚ್ಚಿನ ರೀತಿಯಲ್ಲಿ ಬಳಸುವಂತೆ ಪ್ರೇರೇಪಿಸಿ, ಅನಿಲ ಸಾಕಷ್ಟು ಪ್ರಮಾಣದಲ್ಲಿ ಹೊರಸೂಸುವುದನ್ನು ಮಾಡಿ, ಈಗ ಪರಿಹಾರ ಸೂಚಿಸುತ್ತೇವೆ ಎಂದು ಮುಂದೆ ಬಂದರೆ ಅದು ಯಾವ ರೀತಿಯೂ ನೆರವಾಗುವುದಿಲ್ಲ.


ಇಲ್ಲಿ ಎಲ್ಲರೂ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಈ ಕಾರ್ಯವನ್ನು ಯಾವುದೇ ಒಂದು ದೇಶ ಮಾತ್ರ ಮಾಡಲು ಸಾಧ್ಯವಿಲ್ಲ. ಇನ್ನು ನಾಳೆ ಅಮೇರಿಕ ಅನಿಲವನ್ನೇ ಹೊರಸೂಸುವುದಿಲ್ಲ ಎಂದರೂ ಸಹ ಭಿಕ್ಕಟ್ಟುಗಳು ಮಾತ್ರ ಇರುತ್ತವೆ. ಇಡೀ ವಿಶ್ವದಲ್ಲೇ ನಮ್ಮ ಹೊರಸೂಸುವಿಕೆಯ ಪ್ರಮಾಣ 11% ಮಾತ್ರ. ಇನ್ನು ಮಿಕ್ಕ 89% ಇತರೆ ದೇಶಗಳದ್ದು. 70 ರಿಂದ 75% ಅನಿಲ ಹೊರಸೂಸುವಿಕೆಗೆ ಸುಮಾರು 20 ದೇಶಗಳು ಕಾರಣವಾಗಿವೆ. ಈ 20 ಅಭಿವೃದ್ಧಿ ಹೊಂದಿದ ದೇಶಗಳಿಗೆ ಈ ಕುರಿತು ಹೆಚ್ಚಿನ ಜವಾಬ್ದಾರಿ ಇದೆ. ಆದರೆ ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಎಲ್ಲರಿಗೂ ಜವಾಬ್ದಾರಿಯಿದೆ. ನನ್ನ ಪ್ರಕಾರ ಈ ಕುರಿತು ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರಿಗೆ ವಿಶೇಷ ಅಧಿಕಾರವಿದೆ. ಅವರು ನೈತಿಕ ಅಧಿಕಾರವನ್ನು ಹೊಂದಿದ್ದಾರೆ. ಇದು ಜನರನ್ನು ಪ್ರೋತ್ಸಾಹಿಸಿ, ಹವಾಮಾನ ಬದಲಾವಣೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನೆರವಾಗಬಹುದು.


ನಾವು ಇದನ್ನು ಮಾಡಬಹುದು. ನಮಗೆ ಈ ಕುರಿತು ವಿಶ್ವಾಸವಿದೆ. ಈ ದುರಿತ ಕಾಲದಲ್ಲಿ ಇದನ್ನು ಮಾಡುವುದು ಮುಖ್ಯವಾಗಿದೆ. ಜನರಿಗೆ ಇದು ಮಾಡುವಂತದ್ದು ಎಂಬುದು ಅರಿವಾಗಬೇಕು. ಇದನ್ನು ಮಾಡುವ ನಿಟ್ಟಿನಲ್ಲಿ ನಾವು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಠಿಮಾಡಬಹುದು. ನಾವು ಸ್ವಚ್ಛ ಗಾಳಿಯನ್ನು ಉಸಿರಾಡಬಹುದು. ನಾವು ಒಳ್ಳೆಯ ಆರೋಗ್ಯವನ್ನು ಹೊಂದಬಹುದು. ಕ್ಯಾನ್ಸರ್ ರೋಗವನ್ನು ನಾವು ನಿಯಂತ್ರಿಸಬಹುದು. ಇದಕ್ಕೆ ನಾವು ಪರಿಹಾರ ಕಂಡುಕೊಂಡರೆ ವಾಯು ಮಾಲಿನ್ಯ ಕಡಿಮೆಯಾಗಿ ನಮ್ಮ ಮಕ್ಕಳು ಬೇಸಿಗೆಕಾಲದಲ್ಲಿ ಉಂಟಾಗುವ ಹವಾಮಾನ ಬದಲಾವಣೆಯಿಂದ ಬರುವ ಅಸ್ತಮಾ ರೋಗಕ್ಕೆ ತುತ್ತಾಗಿ, ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಬಹುದು. ಇದರಿಂದ ನಾವು ನಮ್ಮ ದೇಶಗಳಲ್ಲೇ ಇದ್ದು, ನವೀಕರಿಸಬಹುದಾದ ಶಕ್ತಿ ಅಥವಾ ಪರ್ಯಾಯ ಶಕ್ತಿಗೆ ಅವಲಂಬಿತಾರಾಗಿ, ಸ್ವಾವಲಂಬಿ ಜೀವನವನ್ನು ನಡೆಸಬಹುದು. ಅಮೇರಿಕ ದೇಶದಲ್ಲಿ ಅತಿ ವೇಗವಾಗಿ ಹೆಚ್ಚುತ್ತಿರುವ 3 ಉದ್ಯೋಗಗಳಲ್ಲಿ ಎರಡು ಯಾವುವೆಂದರೆ ನಿಮಗೆ ಆಶ್ಚರ್ಯವಾಗುತ್ತದೆ. ವಿಂಡ್ ಟರ್ಬಿನ್ ಟೆಕ್ನಿಷಿಯನ್ ಮತ್ತು ಸೋಲಾರ್ ಪ್ಯಾನೆಲ್ ಇನ್ಸ್ಟಾಲ್ಲರ್ ಉದ್ಯೋಗಗಳು ಅತೀ ವೇಗವಾಗಿ ಹೆಚ್ಚುತ್ತಿವೆ. ಅಂದರೆ, ಈ ಉದ್ಯೋಗಗಳಿಗೆ ಬೇಡಿಕೆ ಇದೆ. ಉದ್ಯೋಗ ಸೃಷ್ಟಿಯಾದರೆ ಜನ ಅವುಗಳನ್ನು ಬಾಚಿಕೊಳ್ಳುತ್ತಾರೆ. ಅಸಾಧ್ಯವಾದುದನ್ನು ಮಾಡಲು ನಾವು ಜನರನ್ನು ಪ್ರೇರೆಪಿಸುತ್ತಿಲ್ಲ ಎಂಬುದನ್ನು ನಾವು ಜನಕ್ಕೆ ತಿಳಿಸಬೇಕಿದೆ. ಆದರೆ ಯಾರಿಗೂ ಈ ಸಮಸ್ಯೆಗೆ ನಾವು ಏನೂ ಮಾಡಬೇಕಿಲ್ಲ ಎಂದು ಹೇಳುವ ಹಕ್ಕಿಲ್ಲ. ಏಕೆಂದರೆ ಕೇವಲ ಒಂದು ದೇಶ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ನಾವೆಲ್ಲರೂ ಒಟ್ಟಾಗಿಯೇ ಈ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ.


ನಾವು ಇದನ್ನು ಮಾಡಿಯೇ ತೀರುತ್ತೇವೆ ಎಂಬ ನಿಮ್ಮ ಹುಮ್ಮಸ್ಸು ನನಗೆ ಪೋಪ್ ಫ್ರಾನ್ಸಿಸ್ ಅವರ “ನಾವೆಲ್ಲರೂ ಒಟ್ಟಾಗಿ ಮಾಡಲು ಸಾಧ್ಯ” ಎಂಬ ಮಾತುಗಳನ್ನು ನೆನಪಿಸುತ್ತದೆ. ರಾಜತಾಂತ್ರಿಕ ಮಟ್ಟದಲ್ಲಿ ನಾನು ನಿಮಗೆ ಒಂದು ವಾಸ್ತವದ ಪ್ರಶ್ನೆಯೊಂದನ್ನು ಕೇಳಬಯಸುತ್ತೇನೆ. ಅಮೆರಿಕವು ಆರ್ಥಿಕ ಮತ್ತು ರಾಜಕೀಯ ಸೂಪರ್ ಪವರ್ ಆಗಿದ್ದು ವ್ಯಾಟಿಕನ್‍ನಂತಹ ಪುಟ್ಟ ದೇಶ, ಅದರಲ್ಲೂ ಆಧ್ಯಾತ್ಮಿಕ ಅಧಿಕಾರವನ್ನು ಮಾತ್ರ ಹೊಂದಿರುವಂತಹ ದೇಶದೊಡನೆ ಸಹಯೋಗ ಹೊಂದಿ ಹವಾಮಾನ ಭಿಕ್ಕಟ್ಟು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಸಾಧ್ಯ?


ಪೋಪ್ ಫ್ರಾನ್ಸಿಸ್ ಇಡೀ ವಿಶ್ವದಲ್ಲಿನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರಾಗಿದ್ದಾರೆ. ದೇವರ ಸೃಷ್ಟಿಯನ್ನು ಮತ್ತೊಬ್ಬರಿಗೆ ಜೀವಿಸುವಂತಹುದ್ದನ್ನಾಗಿ ಪರಿವರ್ತಿಸಲು, ಈ ಸೃಷ್ಟಿಯನ್ನು ಹೇಗೆ ಜವಾಬ್ದಾರಿಯುತವಾಗಿ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಪೋಪ್ ಸ್ಷಷ್ಟವಾಗಿ ಪ್ರತಿಪಾದಿಸುತ್ತಿದ್ದಾರೆ ಹಾಗೂ ಈ ಕುರಿತು ಜನರಿಗೆ ಕರೆನೀಡಿದ್ದಾರೆ. ಅವರ ಸಂದೇಶ: ಈ ಜಗತ್ತು ದೇವರ ಕೊಡುಗೆ. ನಾವೆಲ್ಲರೂ ಅದನ್ನು ಕಾಪಾಡುವ ವ್ಯವಸ್ಥಾಪಕರಾಗಬೇಕು. ಆದರೆ, ಅವರು ರಾಜಕೀಯದಿಂದ ಹೊರತಾಗಿ, ಅದಕ್ಕೂ ಮಿಗಿಲಾದ ಸ್ಥಾನದಲ್ಲಿರುವುದರಿಂದ ಮತ್ತು ದೈನಂದಿನ ರಾಜಕೀಯ ವ್ಯವಸ್ಥೆಯ ಬಿಕ್ಕಟ್ಟುಗಳ ಭಾಗವಾಗದ ಕಾರಣ, ನನ್ನ ಪ್ರಕಾರ ಅವರು ಹವಾಮಾನ ಬದಲಾವಣೆಯ ಕುರಿತು ಎಲ್ಲರಲ್ಲೂ ಜವಾಬ್ದಾರಿಕ ಪ್ರಜ್ಞೆಯನ್ನು ಬಿತ್ತುವವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತಾರೆ. ವ್ಯಾಟಿಕನ್ ಒಂದು ದೇಶವಾಗಿ ಪುಟ್ಟದಾಗಿದ್ದರೂ ಸಹ, ಅದರ ಹಿಂಬಾಲಕರು ವಿಶ್ವಾದಾದ್ಯಂತ ಕೋಟ್ಯಾಂತರ ಇದ್ದಾರೆ. ಪೋಪ್ ಫ್ರಾನ್ಸಿಸ್ ತಮ್ಮ ಕೋಟ್ಯಾಂತರ ಹಿಂಬಾಲಕರನ್ನು ಈ ಕುರಿತು ಏನಾದರೂ ರಚನಾತ್ಮಕವಾಗಿ ಮಾಡುವಂತೆ ಹುರಿದುಂಬಿಸುವ ಶಕ್ತಿಯನ್ನು ಹೊಂದಿದ್ದಾರೆ. ಒಂದೇ ಸಮಯದಲ್ಲಿ ವಿಶ್ವದಾದ್ಯಂತ ಹರಡಿರುವ ತಮ್ಮ ಹಿಂಬಾಲಕರನ್ನು ಉದ್ದೇಶಿಸಿ ಮಾತನಾಡುವ ಹಾಗೂ ಅವರನ್ನು ಸ್ಥಳೀಯ ಸರ್ಕಾರಗಳ ಮೇಲೆ ಒತ್ತಡ ಹಾಕುವ ಹಾಗೂ ಅವರನ್ನು ಒಳ್ಳೆಯ ಕಾರ್ಯಗಳಿಗೆ ಒತ್ತಾಯಿಸುವಂತೆ ಪ್ರೇರೆಪಿಸುವ ಶಕ್ತಿಯನ್ನು ಹೊಂದಿದ್ದಾರೆ. ನನ್ನ ಪ್ರಕಾರ ಇಡೀ ವಿಶ್ವದ ನಾಯಕರು ಪೋಪ್ ಫ್ರಾನ್ಸಿಸ್ ಅವರ ಕುರಿತು ವಿಶೇಷ ಗೌರವವನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅವರು ಅನೇಕ ಕಾರ್ಯಗಳನ್ನು ಈಗಾಗಲೇ ಮಾಡಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ನಾವು ಅವರ ಮಾರ್ಗದರ್ಶನವನ್ನು ಎದುರುನೋಡುತ್ತಿದ್ದೇವೆ.


ಈ ಸಮಸ್ಯೆಯನ್ನು ಬಗೆಹರಿಸಲು ವಿವಿಧ ಘಟಕಗಳು ವಿವಿಧ ನೆರವನ್ನು ನೀಡುತ್ತವೆ. ಅತೀ ಕಡಿಮೆ ಅನಿಲವನ್ನು ಹೊರಸೂಸುತ್ತಿರುವ ದೇಶಗಳು ಸಹ ಇವೆ. ಉದಾಹರಣೆಗೆ ಸ್ವೀಡನ್, ನಾರ್ವೆ, ಸ್ಕಾಂಡಿನೆವಿಯನ್ ದೇಶಗಳು, ಡೆನ್ಮಾರ್ಕ್ ಇತ್ಯಾದಿ. ಕೀನ್ಯಾ ಹಾಗೂ ಇನ್ನೂ ಅನೇಕ ದೇಶಗಳು ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸುವಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿವೆ ಹಾಗೂ ಇವುಗಳೆಲ್ಲವೂ ಪುಟ್ಟ ದೇಶಗಳು. ಅವುಗಳು ಪುಟ್ಟ ದೇಶಗಳಾದರೂ ಅವುಗಳು ಮಾಡುತ್ತಿರುವ ಕಾರ್ಯ ಬಹುದೊಡ್ಡ ಸಂದೇವನ್ನು ನೀಡುತ್ತವೆ. ಅವುಗಳು ಮಾಡುತ್ತಿರುವ ಕಾರ್ಯತಂತ್ರಗಳು ಪರಿಣಾಮಕಾರಿಯಾಗಿದೆ ಮಾತ್ರವಲ್ಲದೆ ಇದು ಹವಾಮಾನ ಬದಲಾವಣೆ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಅಂಶವಾಗಿದೆ. ಸಬಲ ದೇಶವಾದ ಅಮೆರಿಕ ಈ ಕುರಿತು ಎಂದೋ ಕಾರ್ಯಪ್ರವೃತ್ತವಾಗಬೇಕಿತ್ತು. ಆದರೆ ನಾವು ಹೆಚ್ಚು ಅಭಿವೃದ್ಧಿ ಹೊಂದುವುದಕ್ಕೆ ಒತ್ತುಕೊಟ್ಟೆವೇ ವಿನಃ ಅತಿಯಾದ ಅಭಿವೃದ್ಧಿಯಿಂದಾಗುವ ಸಮಸ್ಯೆಗಳ ಕುರಿತು ಯೋಚಿಸಿರಲಿಲ್ಲ. ಆದರೆ ಈಗ ನಮಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಜವಾಬ್ದಾರಿಕ ಪ್ರಜ್ಞೆಯ ಕುರಿತು ಪೋಪ್ ಫ್ರಾನ್ಸಿಸ್ ಅವರ ನೈತಿಕ ಅಧಿಕಾರದಿಂದ ನಮ್ಮನ್ನು ಎಚ್ಚರಿಸಬಲ್ಲರು, ಹಾಗೂ ನಮಗೆ ಮಾರ್ಗದರ್ಶನ ನೀಡಬಲ್ಲರು ಎಂಬುದು ನನ್ನ ಅಭಿಪ್ರಾಯ. ಜಾಗತೀಕವಾಗಿ ಅನೇಕ ದೇಶಗಳು ಧೃವೀಕರಣವಾಗುತ್ತಿರುವ ಈ ದುರಿತ ಕಾಲದಲ್ಲಿ ಪೋಪ್ ಫ್ರಾನ್ಸಿಸ್ ಅವರ ದನಿ ಹಿಂದೆಂದಿಗಿಂತಲೂ ಪ್ರಸ್ತುತವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.



55 views0 comments
bottom of page