top of page

ದಕ್ಷಿಣ ಪಾಕಿಸ್ತಾನದಲ್ಲಿ ರೈಲು ಅಪಘಾತ - ಹಲವಾರು ಮಂದಿ ಸಾವು


ದಕ್ಷಿಣ ಪಾಕಿಸ್ತಾನದಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.


ವ್ಯಾಟಿಕನ್ ವಾರ್ತಾ ಸಿಬ್ಬಂದಿ ವರದಿ


ದಕ್ಷಿಣ ಪಾಕಿಸ್ತಾನದಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಿಂಧ್ ಪ್ರದೇಶದ ದಕ್ಷಿಣ ಪ್ರಾಂತ್ಯದಲ್ಲಿ ಸೋಮವಾರ ಹಳಿ ತಪ್ಪಿ ಚದುರಿದ್ದ ಬೋಗಿಗಳಿಗೆ ಮತ್ತೊಂದು ರೈಲು ಡಿಕ್ಕಿ ಹೊಡೆದದ್ದರ ಪರಿಣಾಮ ಈ ಅವಘಡ ಸಂಭವಿಸಿದೆ. ಅಡ್ಡಾದಿಡ್ಡಿಯಾಗಿ ತೀವ್ರವಾಗಿ ಹಾನಿಗೊಳಗಾಗಿ ಚೆಲ್ಲಾಪಿಲ್ಲಿಯಾಗಿ ಚದುರಿರುವ ಬೋಗಿಗಳು, ಜಖಂಗೊಂಡು ಬೋರಲಾಗಿರುವ ವಿಭಾಗಗಳು ಹಳಿಗಳ ಆಚೀಚೆ ಕಾಣಸಿಗುತ್ತವೆ. ಈ ಭಗ್ನಾವಶೇಷಗಳ ನಡುವೆ ಬದುಕುಳಿದವರನ್ನು ತಲುಪುವ ರಕ್ಷಣಾ ಕಾರ್ಯಕರ್ತರ ದೃಶ್ಯ ಕಾಣ ಸಿಗುತ್ತದೆ.


ಗಾಯಗೊಂಡವರು ಮತ್ತು ಸಾವುನೋವುಗಳು


ಡಜನ್ ಗಟ್ಟಲೆ ಜನರು ಸಾವಿಗೀಡಾಗಿದ್ದರು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದೆಂಬ ಆತಂಕ ಮನೆಮಾಡಿತ್ತು. ಒಂದೆಡೆ ರಕ್ಷಣಾ ಕಾರ್ಯಕರ್ತರು ಬದುಕುಳಿದವರನ್ನು ತಲುಪುವ ಕಾರ್ಯಾಚರಣೆಯಲ್ಲಿದ್ದರು. ಇತ್ತ ರೈಲ್ವೆ ವಕ್ತಾರರು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ಹೇಳಿಕೆ ನೀಡಿದರು. ಜಿಲ್ಲೆಯ ಆಸ್ಪತ್ರೆಗಳಿಗೆ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಾಗರೂಕವಾಗಿರುವಂತೆ ಎಚ್ಚರಿಕೆ ನೀಡಲಾಯಿತು.


ಪಾಕಿಸ್ತಾನದ ರೈಲ್ವೆ ಇಲಾಖೆಯ ಪ್ರಕಾರ ಘೋಟ್ಕಿ ಜಿಲ್ಲೆಯಲ್ಲಿ ಹಳಿ ತಪ್ಪಿದ ನಂತರ ಮೊದಲ ರೈಲಿನ ಹಲವಾರು ಬೋಗಿಗಳು ಪಕ್ಕದ ಹಳಿಗೆ ಅಡ್ಡಲಾಗಿ ಬಿದ್ದವು. ಎರಡನೇ ರೈಲು, ಎದುರಿನ ದಿಕ್ಕಿನಿಂದ ಬರುತ್ತಿದ್ದು, ಈ ಚದುರಿದ್ದ ಬೋಗಿಗಳೊಂದಿಗೆ ಘರ್ಷಣೆಗೊಳಗಾಗಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟ್ವಿಟ್ಟರ್ ನಲ್ಲಿ "ಭಯಾನಕ" ಅಪಘಾತದ ಬಗ್ಗೆ ಆಘಾತ, ಕಳವಳ ವ್ಯಕ್ತಪಡಿಸಿದರು ಮತ್ತು ರೈಲ್ವೆ ಸುರಕ್ಷತೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.


ರೈಲ್ವೆ ವ್ಯವಸ್ಥೆಯು ಒತ್ತಡದಲ್ಲಿದೆ


ದೇಶದ ರೈಲ್ವೆ ವ್ಯವಸ್ಥೆಯು 165 ವರ್ಷಗಳಿಗಿಂತ ಹಳೆಯದಾಗಿದೆ ಮತ್ತು ಈ ರೀತಿಯ ವ್ಯವಸ್ಥೆಯಲ್ಲಿ ಅಪಘಾತಗಳು ಬಹಳ ಸಾಮಾನ್ಯವಾಗಿರುತ್ತದೆ. ಅನೇಕ ರೈಲುಗಳು 40 ವರ್ಷಕ್ಕಿಂತ ಹಳೆಯದಾಗಿದೆ ಮತ್ತು ಆಗಾಗ್ಗೆ ಜನರಿಂದ ಕಿಕ್ಕಿರಿದು ತುಂಬಿರುತ್ತವೆ. ಪಾಕಿಸ್ತಾನದ ರೈಲ್ವೆ ಅಂಕಿ ಅಂಶಗಳ ಪ್ರಕಾರ 2012 ಮತ್ತು 2017 ರ ನಡುವೆ 727 ರೈಲು ಅಪಘಾತಗಳು ಸಂಭವಿಸಿವೆ.


ಹಿಂದೆ 2005 ರಲ್ಲಿ, ಜನರಿಂದ ಕಿಕ್ಕಿರಿದಿದ್ದ ಪ್ರಯಾಣಿಕರ ರೈಲೊಂದು ನಿಲ್ದಾಣದಲ್ಲಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದು ನಂತರ ಈ ಘರ್ಷಣೆಯ ಅವಶೇಷಗಳಿಗೆ ಮತ್ತೊಂದು ರೈಲು ಬಂದು ಅಪ್ಪಳಿಸಿ ಸುಮಾರು 130 ಜನರು ಸಾವನ್ನಪ್ಪಿದ ಘಟನೆ ಇದೇ ಜಿಲ್ಲೆಯಲ್ಲಿ ನಡಿದಿತ್ತು.


ಹಲವಾರು ವರ್ಷಗಳಿಂದ ಇಲ್ಲಿಗೆ ಅಧಿಕಾರಕ್ಕೆ ಬರುವ ಎಲ್ಲ ಸರಕಾರಗಳೂ ಈ ರೈಲ್ವೆ ವ್ಯವಸ್ಥೆಯನ್ನು ನವೀಕರಿಸಲು ಹಣಕಾಸು ಹೊಂದಿಸುವ ಪ್ರಯತ್ನದಲ್ಲಿವೆ.


07 ಜೂನ್ 2021, 12:32


ಕನ್ನಡಕ್ಕೆ: ಸೌಮ್ಯ ಗಾಯತ್ರಿ

14 views0 comments
bottom of page