top of page

ಪೋಪ್: ಮಕ್ಕಳ ಮೇಲಿನ ದೌರ್ಜನ್ಯ ಒಂದು ರೀತಿಯ ಮಾನಸಿಕ ಕೊಲೆ.


ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ದೌರ್ಜನ್ಯದ ವಿರುಧ್ಧ ಹೋರಾಡುತ್ತಿರುವ ಮೀಟರ್ ಸಂಘದ (METER Association) ಪ್ರತಿನಿಧಿಗಳನ್ನು ಶನಿವಾರ ಪೋಪ್ ಫ್ರಾನ್ಸಿಸ್ ಭೇಟಿಮಾಡಿ ಸಮಾಲೋಚನೆ ನಡೆಸಿದರು.


ವರದಿ: ರಾಬಿನ್ ಗೋಮ್ಸ್


ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು “ಮಾನಸಿಕ ಕೊಲೆ” ಎಂದು ಕರೆದಿರುವ ಪೋಪ್ ಫ್ರಾನ್ಸಿಸ್ ಕುಟುಂಬಗಳು, ಶೈಕ್ಷಣಿಕ ಹಾಗೂ ಸಾರ್ವಜನಿಕ ಸಂಸ್ಥೆಗಳು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಾದ ಶಿಶುಕಾಮ, ಮಕ್ಕಳನ್ನು ಹೊಂದಿರುವ ಅಶ್ಲೀಲ ಚಿತ್ರಗಳ ವಿರುಧ್ಧ ಹೊಸ ಹುಮ್ಮಸ್ಸಿನಿಂದ ನಿರಂತರವಾಗಿ ಹೋರಾಡಬೇಕು ಎಂದು ಆಗ್ರಹಿಸಿದರು. “ಈ ನಿಮ್ಮ ಕಾರ್ಯವನ್ನು ಯಾವುದೇ ಹಿಂಜರಿಕೆ ಇಲ್ಲದೆ ಮುಂದುವರೆಸಿ. ಈ ಕುರಿತು ಜನರಲ್ಲಿ ಧೃಡ ಪ್ರಜ್ಞೆಯನ್ನು ರೂಪಿಸಲು ನೀವು ಶೈಕ್ಷಣಿಕ ಅಂಶವನ್ನು ಉಪಯೋಗಿಸಿಕೊಳ್ಳಬೇಕು. ಈ ಮೂಲಕ ದೌರ್ಜನ್ಯ ಮತ್ತು ಶೋಷಣೆಗೆ ನಾಂದಿಹಾಡಬೇಕು” ಎಂದು ವಿಶ್ವಗುರು ಪೋಪ್ ಫ್ರಾನ್ಸಿಸ್ ಮೀಟರ್ ಸಂಘದಿಂದ ಹಾಜರಿದ್ದ ಸುಮಾರು 50 ಜನ ಪ್ರತಿನಿಧಿಗಳಿಗೆ ಉತ್ಸಾಹವನ್ನು ತುಂಬಿದರು. 1989 ರಲ್ಲಿ ಫಾದರ್ ಫಾರ್ತುನಾತೋ ದಿ ನೊತೊ ಎಂಬುವವರಿಂದ ಸಿಸಿಲಿಯಲ್ಲಿ ಸ್ಥಾಪಿಸಲ್ಪಟ್ಟ ಈ ಸಂಘವು ಮಕ್ಕಳ ದೌರ್ಜನ್ಯದ ವಿರುದ್ಧ ವಿಶೇಷವಾಗಿ ಶಿಶುಕಾಮ ಮತ್ತು ಮಕ್ಕಳ ಅಶ್ಲೀಲ ಚಿತ್ರಗಳ ವಿರುಧ್ಧ ಹೋರಾಟವನ್ನು ಮಾಡುತ್ತಾ ಬಂದಿದೆ.


ಸದಯ ಸಮಾರಿತ


ಸ್ವತಃ ಮಕ್ಕಳ ಮೇಲಿನ ದೌರ್ಜನ್ಯದ ವಿಶೇಷವಾಗಿ ಧರ್ಮಸಭೆಯಲ್ಲಿ ನಡೆದ ಮಕ್ಕಳ ಮೇಲಿನ ದೌರ್ಜನ್ಯದ ಕಡು ವಿರೋಧಿಯಾಗಿರುವ ಪೋಪ್ ಫ್ರಾನ್ಸಿಸ್ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗಳ ವಿರುಧ್ಧ ಹೋರಾಡುತ್ತಿರುವ ಮೀಟರ್ ಸಂಘಕ್ಕೆ ಬೆಂಬಲಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಇದೇ ಸಮಯದಲ್ಲಿ ಮುಂದುವರೆದು ಮಾತನಾಡಿದ ಪೋಪ್ “ಮೀಟರ್ ಸಂಘವು ತಮ್ಮ ಈ ಕಾರ್ಯದ ಮೂಲಕ ಧರ್ಮಸಭೆ ತನ್ನ ಪುಟ್ಟ ಮಕ್ಕಳ ಮೇಲೆ ಹಾಗೂ ದುರ್ಬಲರ ಮೇಲೆ ಹೊಂದಿರುವ ವಿಶೇಷ ಪ್ರೀತಿಯನ್ನು ಪ್ರತಿಬಿಂಬಿಸುತ್ತಿದೆ.” ಎಂದರು. “ಅವರು ಮಕ್ಕಳನ್ನು ಗೌರವದಿಂದ ಕಂಡು, ಅವರಿಗೆ ಹತ್ತಿರದವರಾಗಿ ದಯೆ, ಮತ್ತು ಅತಃಕರಣದಿಂದ ಸಹಾಯಸ್ತವನ್ನು ಚಾಚಿದ್ದಾರೆ ಮಾತ್ರವಲ್ಲದೆ ಅವರ ಆಧ್ಯಾತ್ಮಿಕ ಗಾಯಗಳಿಗೆ ಸದಯ ಸಮಾರಿತನಂತೆ ಶುಶ್ರೂಷೆಯನ್ನು ನೀಡಿದ್ದಾರೆ” ಎಂದು ಪೋಪ್ ಫ್ರಾನ್ಸಿಸ್ ನುಡಿಯುತ್ತಾರೆ.


ಸ್ವಾಗತಿಸುವ ಮನೆ


ಮೀಟರ್ ಸಂಘವನ್ನು ಕುರಿತು ಮಾತನಾಡುತ್ತಾ ಪೋಪ್ ಫ್ರಾನ್ಸಿಸ್ ಇದೊಂದು ಕೌಟುಂಬಿಕ ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿರುವ ಮನೆಯಾಗಿದೆ. ಈ ಆಶ್ರಯಧಾಮವು ಎಲ್ಲರನ್ನೂ ಸ್ವಾಗತಿಸುತ್ತದೆ. ವಿಶೇಷವಾಗಿ ಹತಾಶೆ ಮತ್ತು ನೋವಿನಲ್ಲಿರುವವರಿಗೆ ಇದೊಂದು ಸಾಂತ್ವನ ಕೇಂದ್ರವಾಗಿದೆ. “ವಯಸ್ಕರ ಸ್ವಾರ್ಥಕ್ಕೆ ಬಲಿಯಾದ ಮುಗ್ಧ ಮಕ್ಕಳಿಗೆ ನೀವು ಒಂದು ಕುಟುಂಬ ಹಾಗೂ ವಾತ್ಸಲ್ಯದ ಮನೆಯಾಗಿದ್ದೀರಿ.” ಎಂದು ಅವರ ಕಾರ್ಯವನ್ನು ಶ್ಲಾಘಿಸಿದ ಪೋಪ್ ಫ್ರಾನ್ಸಿಸ್ ಭರವಸೆಯನ್ನು ಕಳೆದುಕೊಂಡವರಲ್ಲಿ ಮತ್ತೆ ಭರವಸೆಯನ್ನು ತುಂಬುವ, ಅವರನ್ನು ಬಿಡುಗಡೆಯ ಹಾದಿಯಲ್ಲಿ ನಡೆಸುವ ಕಾರ್ಯವನ್ನು ಮುಂದುವರೆಸುವಂತೆ ಪ್ರೋತ್ಸಾಹಿಸಿದರು.


ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳು ಇನ್ನೂ ವ್ಯಾಪಕವಾಗಿ ಹರಡುತ್ತಿರುವ ನಿಟ್ಟಿನಲ್ಲಿ ಮೀಟರ್ ಸಂಘದ ಹೋರಾಟ ಮತ್ತಷ್ಟು ಅವಶ್ಯಕವಾಗಿದೆ ಎಂದು ಪೋಪ್ ಅಭಿಪ್ರಾಯಪಟ್ಟರು. ಕುಟುಂಬಗಳು, ಶೈಕ್ಷಣಿಕ ಹಾಗೂ ಸಾರ್ವಜನಿಕ ಸಂಸ್ಥೆಗಳು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಾದ ಶಿಶುಕಾಮ, ಮಕ್ಕಳನ್ನು ಹೊಂದಿರುವ ಅಶ್ಲೀಲ ಚಿತ್ರಗಳ ವಿರುಧ್ಧ ಹೊಸ ಹುಮ್ಮಸ್ಸಿನಿಂದ ನಿರಂತರವಾಗಿ ಹೋರಾಡಬೇಕು ಮತ್ತು ಶಿಕ್ಷಕರು ಈ ಕುರಿತು ಜಾಗೃತಿಯನ್ನು ಮೂಡಿಸಬೇಕು ಎಂದು ಆಗ್ರಹಿಸಿದರು.


“ಇಂದೂ ಸಹ ಅದೆಷ್ಟೋ ಕುಟುಂಬಗಳು ತಮ್ಮ ಮಕ್ಕಳ ಮೇಲೆ ನಡೆದ ದೌರ್ಜನ್ಯಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ. ಇದು ಅನೇಕ ಸಂಸ್ಥೆಗಳಲ್ಲಿಯೂ ಇದೆ. ಅಷ್ಟೇ ಯಾಕೆ, ನಮ್ಮ ಧರ್ಮಸಭೆಯಲ್ಲಿಯೂ ಸಹ ಇದೆ. ಮುಚ್ಚಿಹಾಕುವ ಈ ಹಳೆಯ ಪರಿಪಾಠಕ್ಕೆ ನಾವು ತಿಲಾಂಜಲಿ ಹಾಡಲೇಬೇಕಾಗಿದೆ.” ಎಂದು ಹೇಳಿದರು.


ಮಕ್ಕಳ ಮೇಲಿನ ದೌರ್ಜನ್ಯ


ಮಕ್ಕಳ ಮೇಲಿನ ದೌರ್ಜನ್ಯವನ್ನು ಒಂದು ರೀತಿಯ “ಮಾನಸಿಕ ಕೊಲೆ” ಎಂದು ಕರೆದಿರುವ ಪೋಪ್ ಫ್ರಾನ್ಸಿಸ್ ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದೆಂದರೆ “ಅವರ ಬಾಲ್ಯವನ್ನೇ ಕಸಿದುಕೊಂಡಂತೆ” ಎಂದು ಹೇಳಿದರು. ಲೈಂಗಿಕ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವುದು ಎಲ್ಲಾ ದೇಶಗಳ ಜವಾಬ್ದಾರಿಯಾಗಿದೆ. ಮಕ್ಕಳ ಶೋಷಕರನ್ನು ಹಾಗೂ ಮಕ್ಕಳ ಕಳ್ಳಸಾಕಣೆಯನ್ನು ಮಾಡುವವರನ್ನು ಕಂಡುಹಿಡಿಯುವ ಜವಾಬ್ದಾರಿ ಸರ್ಕಾರಗಳ ಮೇಲಿದೆ” ಎಂದರು. ಸಮಾಜದ ಹಲವು ಮಜಲುಗಳಾದ ಶಾಲೆಗಳು, ಕ್ರೀಡಾಸ್ಥಳಗಳು, ಸಾಂಸ್ಕøತಿಕ ಮತ್ತು ಮನೋರಂಜನಾ ಸಂಸ್ಥೆಗಳಲ್ಲಿ ಹಾಗೂ ಧಾರ್ಮಿಕ ಸಮುದಾಯಗಳಲ್ಲಿ ವ್ಯಕ್ತಿಗಳಿಂದ ಲೈಂಗಿಕ ಶೋಷಣೆ ನಡೆಯದಂತೆ ಎಚ್ಚರವಹಿಸುವುದು ಹಾಗೂ ಇಂತಹ ಪ್ರಯತ್ನಗಳಿಗೆ ಆಸ್ಪದ ಕೊಡದಿರುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಶಿಶುಕಾಮದ ಸಂತ್ರಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಾಯೋಗಿಕ ಪರಿಹಾರ ಕ್ರಮಗಳನ್ನೂ ಸಹ ವಿಶ್ಲೇಷಿಸಬೇಕು ಎಂದು ಪೋಪ್ ಅಭಿಪ್ರಾಯಪಟ್ಟರು.


ಮಾತೆ ಮರಿಯಮ್ಮನವರು ಈ ಸಂಘದ ಮಾರ್ಗದರ್ಶಿ


ಮೀಟರ್ ಅಸೋಸಿಯೇಷನ್‍ನ ಚಿಹ್ನೆಯ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಆ ಚಿಹ್ನೆಯಲ್ಲಿರುವ “ಒ” ಅಕ್ಷರವನ್ನುದ್ದೇಶಿಸಿ “ಈ ಅಕ್ಷರವು ತಾಯಿ ಗರ್ಭವನ್ನು ಪ್ರತಿಬಿಂಬಿಸುವುದಲ್ಲದೆ ಸ್ವಾಗತ ಸೂಚಕವು ಆಗಿದೆ. ಇದು ರಕ್ಷಣೆ ಮತ್ತು ಆಶ್ರಯದ ಸಂಕೇತವಾಗಿದ್ದು ಪುಟ್ಟ ಮಕ್ಕಳನ್ನು ಅಪ್ಪಿಕೊಳ್ಳುವಂತದ್ದಾಗಿದೆ. ಇದರೊಳಗೆ ಇರುವ 12 ನಕ್ಷತ್ರಗಳು ಯೇಸುವಿನ ತಾಯಿ ಹಾಗೂ ಎಲ್ಲಾ ಮಕ್ಕಳ ಅಮ್ಮ ಮಾತೆ ಮರಿಯಳ ಕೀರೀಟದಲ್ಲಿರುವ 12 ನಕ್ಷತ್ರಗಳನ್ನು ಸೂಚಿಸುತ್ತದೆ.” ಮಾತೆ ಮರಿಯಮ್ಮನವರು ಈ ಸಂಘದ ಮಾರ್ಗದರ್ಶಿ ಮತ್ತು ಮಾದರಿಯಾಗಿದ್ದು, ನಾವು ಶೋಷಣೆಗೆ ಒಳಗಾದ ಮಕ್ಕಳನ್ನು ಶುಭಸಂದೇಶದ ಪ್ರೀತಿ ಮತ್ತು ದಯೆಯಿಂದ ಪೊರೆಯಬೇಕೆಂದು ಪ್ರೋತ್ಸಾಹಿಸುತ್ತಾರೆ. ಪ್ರಾರ್ಥನೆಯ ಮೂಲಕ, ವಿಶೇಷವಾಗಿ ಬಲಿಪೂಜೆಯ ಮೂಲಕ ನಿರಂತರವಾಗಿ ಸಂಘದ ಸದಸ್ಯರು ಪ್ರಾರ್ಥಿಸಬೇಕೆಂದು ಕರೆ ನೀಡಿದರು. ಕೊನೆಯದಾಗಿ, ಈ ಕಾರ್ಯದಲ್ಲಿ ಅನೇಕ ಭಿನ್ನಾಭಿಪ್ರಾಯಗಳು ಅಥವಾ ತಾತ್ಕಾಲಿಕ ಸಮಸ್ಯೆಗಳು ಬರಬಹುದು. ಆದರೆ ಇದ್ಯಾವುದಕ್ಕೂ ಭಯಪಡದೆ, ಮುಂದೆ ಸಾಗಿರಿ ಎಂದು ಪೋಪ್ ಸಂಘದ ಸದಸ್ಯರನ್ನು ಪ್ರೋತ್ಸಾಹಿಸಿದರು.


2020 ರಲ್ಲಿ ಆನ್ಲೈನ್ ಮಕ್ಕಳ ಅಶ್ಲೀಲ ಚಿತ್ರಗಳ ಸೃಷ್ಟಿಯಲ್ಲಿ ಏರಿಕೆ


ಮೀಟರ್ ಅಸೋಸಿಯೇಷನ್ ವರದಿಯ ಪ್ರಕಾರ 2020 ರಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. “ಶಿಶುಕಾಮ ಮತ್ತು ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆಗೆ ಕೋವಿಡ್‍ನ ಅಡ್ಡಿಯಿಲ್ಲ ಹಾಗೂ ಇವಕ್ಕೆ ಲಸಿಕೆಯ ಅಗತ್ಯವೂ ಇಲ್ಲ.” ಮಕ್ಕಳ ಅಶ್ಲೀಲ ಚಿತ್ರಗಳ ವಿಡಿಯೋಗಳ ಸಂಖ್ಯೆ 2019 ರಲ್ಲಿ 992,300 ಆಗಿದ್ದರೆ ಅದೇ 2020 ರಲ್ಲಿ ಈ ಸಂಖ್ಯೆ 2,032,556 ಆಗಿದೆ. ಅಂದರೆ ಏರಿಕೆಯ ಪ್ರಮಾಣ ಎಷ್ಟಿದೆ ಎಂಬುದನ್ನು ನಾವು ನೋಡಬಹುದು.


ಶಿಶುಕಾಮಿಗಳು ಕೇವಲ ಫೋಟೋಗಳನ್ನು ನೋಡುವುದು ಮಾತ್ರವಲ್ಲ ವಿಡಿಯೋಗಳಿಗಾಗಿ ಹಂಬಲಿಸುತ್ತಾರೆ ಎನ್ನುವುದನ್ನು ಈ ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಈ ರೀತಿಯ ದೃಶ್ಯಗಳನ್ನು ನೋಡಿ ಅವರು ತಮ್ಮ ಕಾಮತೃಷೆಯನ್ನು ತೃಪ್ತಿಪಡಿಸಿಕೊಳ್ಳುತ್ತಾರೆ ಎಂದು ಮೀಟರ್ ಸಂಘದ ವರದಿ ಹೇಳಿದೆ.


15 ಮೇ 2021, 12:40

69 views0 comments
bottom of page