top of page

ಯೇಸುವಿನ ಸ್ವರ್ಗಾರೋಹಣ ನಮಗೆ ಸಂತೋಷವನ್ನು ತರುತ್ತದೆ: ಪೋಪ್ ಫ್ರಾನ್ಸಿಸ್


ಭಾನುವಾರದ “ರೆಜಿನಾ ಚೇಲಿ” (ಸ್ವರ್ಗದ ರಾಣಿಯೇ) ಪ್ರಾರ್ಥನೆಯಲ್ಲಿ ಯೇಸುಕ್ರಿಸ್ತರು ನಿಜವಾದ ದೇವರಾಗಿ, ನಿಜವಾದ ಮನುಷ್ಯರಾಗಿ ಮತ್ತು ಪವಿತ್ರಾತ್ಮರ ವಾಗ್ದಾನವಿತ್ತು ಸ್ವರ್ಗಾರೋಹಣವಾದದ್ದೇ ನಮ್ಮ ಸಂತೋಷಕ್ಕೆ ಕಾರಣ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು


ವ್ಯಾಟಿಕನ್ ವರದಿ


ಯೇಸು ಕ್ರಿಸ್ತರು ಸ್ವರ್ಗಾರೋಹಣವಾದಾಗ ಶಿಷ್ಯರಲ್ಲಿ ಯಾವುದೇ ರೀತಿಯ ನಷ್ಟ ಅಥವಾ ಅವರನ್ನು ತೊರೆದು ಹೋದರೆಂಬ ಭಾವ ಅವರನ್ನು ಕಾಡಲಿಲ್ಲ ಎಂದು ಪೋಪ್‍ರವರು ಹೇಳಿದರು. ಯೇಸುಕ್ರಿಸ್ತರ ಸ್ವರ್ಗಾರೋಹಣದಿಂದ ಶಿಷ್ಯರಿಗೆ ತಾವು ಪ್ರಭುವಿನಿಂದ ಬೇರ್ಪಟ್ಟಿದ್ದೇವೆ ಎಂಬ ಕೊರಗು ಅವರನ್ನು ಕಾಡಲಿಲ್ಲ ಬದಲಿಗೆ ಅವರು ಸಂತೋಷದಿಂದ ಜಗತ್ತಿಗೆ ಸುವಾರ್ತಾ ಪ್ರಸಾರಕರಾಗಿ ಹೋಗಿ ಶುಭಸಂದೇಶ ಸಾರಲು ಸಿದ್ಧರಾದರು.

ದೇವಪುತ್ರರು ಶಿಷ್ಯರಿಂದ ಬೇರ್ಪಟ್ಟಾಗ ಶಿಷ್ಯರು ಏಕೆ ಮರುಗಲಿಲ್ಲ? ಎಂದು ಪೋಪ್ ಫ್ರಾನ್ಸಿಸ್ ಕೇಳಿದರು. ನಾವು ಸಹ ಯೇಸುಕ್ರಿಸ್ತರು ಸ್ವರ್ಗಾರೋಹಣವಾಗಿರುವುದನ್ನು ಕಂಡು ಏಕೆ ಹರ್ಷಿಸಬೇಕು? ಎಂಬ ಪ್ರಶ್ನೆಗೆ ಈ ರೀತಿಯಾಗಿ ಉತ್ತರ ನೀಡಿದರು. ಯೇಸುವಿನ ಸ್ವರ್ಗಾರೋಹಣವು ಅವರ ಸುವಾರ್ತಾ ಕಾರ್ಯವು ನಮ್ಮಲ್ಲಿ ಸಂಪೂರ್ಣಗೊಳ್ಳುತ್ತದೆ.


ಇಟಲಿಯಂತೆ ಪ್ರಪಂಚದಾದ್ಯಂತ ಇತರೆ ದೇಶಗಳಲ್ಲಿ ಸ್ವರ್ಗಾರೋಹಣದ ಹಬ್ಬವನ್ನು ಪುನರುತ್ಥಾನ ಹಬ್ಬದ ನಂತರದ ಆರನೇ ಭಾನುವಾರದಂದು ಧಾರ್ಮಿಕವಾಗಿ ಆಚರಿಸಲಾಗುತ್ತದೆ. “ನಮ್ಮ ಮನುಕುಲಕ್ಕೆ ಇಳಿದ ನಂತರ ಮತ್ತು ಅದನ್ನು ರಕ್ಷಿಸಿ, ಈಗ ಯೇಸು ಸ್ವರ್ಗಕ್ಕೇರಿ, ನಮ್ಮನ್ನು ಅವರೊಂದಿಗೆ ಕರೆದೊಯ್ದಿದ್ದಾರೆ.” ಎಂದರು ಪೋಪ್ ಜಗದ್ಗುರುಗಳು.

ಸ್ವರ್ಗಕ್ಕೆ ಆರೋಹಣವಾದ ಮೊದಲ ಮಾನವ ಜೀವಿ ಯೇಸುಕ್ರಿಸ್ತರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಯೇಸು ಸ್ವರ್ಗವನ್ನು ಪ್ರವೇಶಿಸಿದ ಮೊದಲ ವ್ಯಕ್ತಿ. ಏಕೆಂದರೆ ನಿಖರವಾಗಿ ಅವರು ಸತ್ಯಸ್ಯ ದೇವರು ಮತ್ತು ನೈಜ ಮನುಷ್ಯರು ಆಗಿದ್ದರು. “ನಮ್ಮ ಶರೀರವು ಸ್ವರ್ಗದಲ್ಲಿದೆ”, ಎಂದು ಪೋಪ್ ಉದ್ಗರಿಸುತ್ತಾ “ಮತ್ತು ಇದು ನಮಗೆ ಹರ್ಷವನ್ನು ನೀಡುತ್ತದೆ!”.


“ಅವರ ಸ್ವರ್ಗಾರೋಹಣವು ಅಗಲಿಕೆಯಲ್ಲ; ಏಕೆಂದರೆ ಯೇಸು ತಮ್ಮ ಶಿಷ್ಯರೊಂದಿಗೂ, ನಮ್ಮೊಂದಿಗೂ ಪ್ರಾರ್ಥನೆಯಲ್ಲಿ ನಿತ್ಯವೂ ನಮ್ಮೊಂದಿಗೆ ಇರುತ್ತಾರೆ. ನಮ್ಮನ್ನು ರಕ್ಷಿಸಿದ ಗಾಯಗಳನ್ನು ಯೇಸು ಪಿತ ದೇವರಿಗೆ ತೋರಿಸುವುದು ನಮಗೆ ಭದ್ರತೆಯನ್ನು ಮತ್ತು ಹರ್ಷವನ್ನು, ಅತಿಯಾದ ಹರ್ಷವನ್ನು ನೀಡುತ್ತದೆ.” ಎಂದರು ಪೋಪ್ ಫ್ರಾನ್ಸಿಸ್.


ಮುಂದುವರೆದು ಮಾತನಾಡಿದ ಪೋಪ್ “ಪವಿತ್ರಾತ್ಮರನ್ನು ಕಳಿಸುತ್ತೇನೆ ಎಂಬ ಯೇಸುವಿನ ವಾಗ್ದಾನವೇ ನಮ್ಮ ಈ ಸಂತೋಷಕ್ಕೆ ಎರಡನೇ ಕಾರಣವಾಗಿದೆ. ಕ್ರಿಸ್ತರು ಅವರ ಸ್ವರ್ಗಾರೋಹಣದ ನಂತರ ಪವಿತ್ರಾತ್ಮರನ್ನು ಕಳುಹಿಸಿದರು. ಹೊರಗೆ ಹೋಗಿ ಶುಭಸಂದೇಶವನ್ನು ಸಾರುವುದಕ್ಕೆ ಪವಿತ್ರಾತ್ಮರನ್ನು ಕಳುಹಿಸುತ್ತೇನೆ ಎಂದು ಯೇಸುಕ್ರಿಸ್ತರು ನಮಗೆ ಭರವಸೆಯನ್ನು ನೀಡುತ್ತಾರೆ. ನಮ್ಮ ಇಂದಿನ ಸಂತೋಷಕ್ಕೆ ಹಾಗೂ ಸ್ವರ್ಗಾರೋಹಣದ ಸಂತೋಷಕ್ಕೆ ಇದೇ ಕಾರಣ.”


“ಈ ಜಗತ್ತಿನಲ್ಲಿ ಜೀವನದ ನಮ್ಮೆಲ್ಲ ಭಿನ್ನ ಪರಿಸ್ಥಿತಿಗಳ ನಡುವೆಯೂ ನಾವು ಧೈರ್ಯದ ಸಾಕ್ಷಿಗಳಾಗಲೆಂದು ಸ್ವರ್ಗದ ರಾಣಿಯಾದ ಮಾತೆ ಮರಿಯಮ್ಮನವರು ನಮಗೆ ಸಹಾಯವಾಗಲಿ” ಎಂಬ ಪ್ರಾರ್ಥನೆಯೊಂದಿಗೆ ಪೋಪ್ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

72 views0 comments
bottom of page