top of page

ಸಂತ ಜೋಸೆಫರ ಮನವಿಮಾಲೆಗೆ 7 ನೂತನ ಬಿನ್ನಹಗಳನ್ನು ಅನುಮೋದಿಸಿದ ಪೋಪ್ ಫ್ರಾನ್ಸಿಸ್

  • Writer: BangaloreArchdiocese
    BangaloreArchdiocese
  • May 14, 2021
  • 2 min read

ree

ಮೇ 1 ರಂದು, ಕಾರ್ಮಿಕರಾದ ಸಂತ ಜೋಸೆಫರ ಹಬ್ಬದ ದಿನದಂದು ಪೋಪ್ ಫ್ರಾನ್ಸಿಸರ ಅನುಮೋದನೆಯೊಂದಿಗೆ ವ್ಯಾಟಿಕನ್ ಪೀಠವು ಸಂತ ಜೋಸೇಫರ ಮನವಿಮಾಲೆಗೆ 7 ನೂತನ ಭಿನ್ನಹಗಳನ್ನು ಸೇರಿಸಿದೆ.


ವರದಿ: ರಾಬಿನ್ ಗೋಮ್ಸ್


ಧೈವಾರಾಧನೆ ಮತ್ತು ಸಂಸ್ಕಾರಗಳ ಶಿಸ್ತಿನ ಬಗೆಗಿನ ಉಸ್ತುವಾರಿಯನ್ನು ಹೊಂದಿರುವ ವ್ಯಾಟಿಕನ್ ಪೀಠವು ಸಂತ ಜೋಸೆಫರ ಮನವಿಮಾಲೆಗೆ ಸೇರಿಸಲಾಗುವ ನೂತನ 7 ಬಿನ್ನಹಗಳನ್ನು ಪರಿಚಯಿಸಿತು. ಪೋಪ್ ಫ್ರಾನ್ಸಿಸ್ ಡಿಸೆಂಬರ್ 8, 2020 ರಿಂದ ಡಿಸೆಂಬರ್ 8, 2021 ವರೆಗಿನ ಅವಧಿಯನ್ನು ಬಡವರ ತಂದೆ ಸಂತ ಜೋಸೆಫರ ವರ್ಷವನ್ನಾಗಿ ಘೋಷಿಸಿದ್ದಾರೆ. ಸಂತ ಜೋಸೆಫರ ವರ್ಷದಲ್ಲೇ ಸಂತ ಜೋಸೆಫರ ಮನವಿಮಾಲೆಗೆ ನೂತನ ಬಿನ್ನಹಗಳನ್ನು ಸೇರಿಸುತ್ತಿರುವುದು ವಿಶೇಷವಾಗಿದೆ.


ಪ್ರಪಂಚದಾದ್ಯಂತ ಇರುವ ಧರ್ಮಾಧ್ಯಕ್ಷರುಗಳ ಸಮಿತಿಗಳ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಈ ಉಸ್ತುವಾರಿ ಪೀಠದ ಕಾರ್ಯದರ್ಶಿಯಾದ ಮಹಾಧರ್ಮಾಧ್ಯಕ್ಷ ಆರ್ಥರ್ ರೋಚ್ ಹಾಗೂ ಅಧೀನ ಕಾರ್ಯದರ್ಶಿಯಾದ ಫಾದರ್ ಕೊರಾದೊ ಮಾಗ್ಗಿಯೊನಿ, ಎಸ್‍ಎಂಎಂ, ಅವರು ವ್ಯಾಟಿಕನ್‍ನ ಈ ಕ್ರಮದ ಹಿನ್ನೆಲೆಯ ಕುರಿತು ಹೀಗೆ ವಿವರಿಸುತ್ತಾರೆ: “ಸಂತ ಜೋಸೆಫರನ್ನು ಅಖಿಲ ಧರ್ಮಸಭೆಯ ಪಾಲಕ ಸಂತರೆಂದು ಘೋಷಿಸಿದ ದಿನದ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪೋಪ್ ಫ್ರಾನ್ಸಿಸ್ ಸಂತ ಜೋಸೆಫರನ್ನು ಧರ್ಮಸಭೆಯ ವಿಶ್ವಾಸಿಗಳೆಲ್ಲರೂ ಈ ಸಂತರ ಕುರಿತು ವಿಶೇಷ ಪ್ರೀತಿಯನ್ನು ಹೊಂದಲೆಂದು, ಅವರ ಮಧ್ಯಸ್ಥಿಕೆಯನ್ನು ನಮ್ಮ ಪ್ರಾರ್ಥನೆಗಳಲ್ಲಿ ಕೋರಲೆಂದು ಹಾಗೂ ಅವರ ಸದ್ಗುಣಗಳ ಜೀವನವನ್ನು ನಾವು ಅನುಸರಿಸಲೆಂದು ತಮ್ಮ ಪ್ರೇಷಿತ ಪತ್ರ “ಪಾತ್ರಿಸ್ ಕೊರ್ದೆ” (ತಂದೆಯ ಹೃದಯದಿಂದ) ಯನ್ನು ಪ್ರಕಟಿಸಿದರು. ಈ ಹಿನ್ನೆಲೆಯಲ್ಲಿ 1909 ರಲ್ಲಿ ಅನುಮೋದನೆಗೊಂಡ ಸಂತ ಜೋಸೆಫರ ಮನವಿಮಾಲೆಗೆ ನೂತನವಾಗಿ ಭಿನ್ನಹಗಳನ್ನು ಸೇರಿಸಲು ಇದು ಸದವಕಾಶವೆಂದು ತೋರಿದೆ.”


ಈ ಉಸ್ತುವಾರಿ ಪೀಠವು ಮನವಿಮಾಲೆಗೆ ಸೇರಿಸಲಾಗುವ 7 ನೂತನ ಬಿನ್ನಹಗಳನ್ನು ಪೋಪ್ ಫ್ರಾನ್ಸಿಸ್‍ರವರಿಗೆ ತೋರಿಸಿದಾಗ, ಅವರು ಅದನ್ನು ಅಧಿಕೃತವಾಗಿ ಅನುಮೋದಿಸಿದ್ದಾರೆ.


ಮೂಲ ಲತೀನ್ ಭಾಷೆಯಲ್ಲಿರುವ ಸಂತ ಜೋಸೆಫರ ಮನವಿಮಾಲೆಗೆ ನೂತನವಾಗಿ ಸೇರಿಸಲ್ಪಡುವ ಬಿನ್ನಹಗಳು ಹೀಗಿವೆ: ಕುಸ್ತೊಸ್ ರೆದೆಂಪ್ತೊರಿಸ್, ಸೆರ್ವೆ ಕ್ರಿಸ್ತಿ, ಮಿನಿಸ್ತೆರ್ ಸಲುತಿಸ್, ಫುಲ್ಚಿಮೆನ್ ಇನ್ ದಿಫಿಕುಲ್ತಾತಿಬುಸ್, ಪತ್ರೊನೆ ಎಕ್ಸುಲುಮ್, ಪತ್ರೊನೆ ಅಫ್ಲಿಕ್ತೋರುಮ್, ಪತ್ರೊನೆ ಪೌಪೆರುಮ್. ಇದನ್ನು ಕನ್ನಡಕ್ಕೆ ಅನುವಾದಿಸಿ ಹೀಗೆ ಹೇಳಬಹುದು: ರಕ್ಷಕರ ಪಾಲಕರೇ, ಕ್ರಿಸ್ತರ ಸೇವಕರೇ, ಸ್ವಾಸ್ಥ್ಯದ ಸೇವಾಕರ್ತರೇ, ಕಷ್ಟಗಳಲ್ಲಿ ನೆರವಾಗುವವರೇ, ವಲಸಿಗರ ಪಾಲಕರೇ, ಸಂಕಟಪೀಡಿತರಿಗೆ ಪಾಲಕರೇ, ಮತ್ತು ಬಡವರ ಪಾಲಕರೇ.


ನೂತನವಾಗಿ ಸೇರಿಸಲ್ಪಟ್ಟ ಈ ಪ್ರಾರ್ಥನೆಗಳೊಂದಿಗೆ ಸಂತ ಜೋಸೇಫರ ಮನವಿಮಾಲೆಯಲ್ಲಿನ ಭಿನ್ನಹಗಳ ಸಂಖ್ಯೆ 31ಕ್ಕೇರಿದೆ. ಈ ಕುರಿತು ಮುಂದುವರೆದು ವ್ಯಾಟಿಕನ್ ಉಸ್ತುವಾರಿ ಪೀಠವು ಈ ರೀತಿಯಾಗಿ ಹೇಳಿದೆ: “ತಮ್ಮ ಪ್ರಾಂತ್ಯಗಳಲ್ಲಿರುವ ಭಾಷೆಗಳಿಗೆ ಈ ನೂತನ ಬಿನ್ನಹಗಳನ್ನು ಅನುವಾದಿಸುವುದು ಆಯಾ ಪ್ರದೇಶಗಳ ಧರ್ಮಾಧ್ಯಕ್ಷರುಗಳ ಸಮಿತಿಯ ಕರ್ತವ್ಯವಾಗಿದೆ. ಈ ಅನುವಾದಗಳಿಗೆ ವ್ಯಾಟಿಕನ್‍ನಿಂದ ಅನುಮೋದನೆ ಪಡೆಯುವ ಅಗತ್ಯವಿಲ್ಲ.” ಇದಲ್ಲದೆ ಆಯಾ ದೇಶಗಳಲ್ಲಿ ಸಂತ ಜೋಸೆಫರನ್ನು ಗೌರವಿಸುವ ಇತರ ವಿಶೇಷಣಗಳನ್ನೂ ಸಹ ಈ ಮನವಿಮಾಲೆಗೆ ಸೇರಿಸಲು ಧರ್ಮಾಧ್ಯಕ್ಷರುಗಳ ಸಮಿತಿಗಳು ಸ್ವತಂತ್ರವಾಗಿವೆ ಎಂಬುದನ್ನೂ ಹೇಳಿರುವ ವ್ಯಾಟಿಕನ್ ಪೀಠವು ಹೊಸ ವಿಶೇಷಣ ಪ್ರಾರ್ಥನೆಗಳನ್ನು ಸೇರಿಸುವಾಗ ಮನವಿಮಾಲೆಯ ಭಾಷಾ ಪ್ರಕಾರವನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಹೊಂದುವಂತೆ ಹೊಸದನ್ನು ಸೇರಿಸಬೇಕು ಎಂಬುದನ್ನೂ ಸಹ ಹೇಳಿದೆ.


ADDRESS

Archbishop’s House

75 Millers Road,

Bengaluru – 560 046

Karnataka

India

JOIN THE ARCHDIOCESAN 
MAILING LIST
  • Grey Facebook Icon
  • Grey Instagram Icon

QUICK LINKS : CCBI | VATICAN 

© 2025 ALL RIGHTS RESERVED ARCHDIOCESE OF BANGALORE (ARCHDIOCESAN COMMUNICATIONS CENTER & AVE STUDIOS) | DESIGNED BY WISE MEDIA 

bottom of page